ಬೆಂಗಳೂರು:ಗಣೇಶ ಚತುರ್ಥಿಯೆಂದು ಪೂಜೆ- ಪುನಸ್ಕಾರ ಮಾಡಿಸಿಕೊಂಡಿದ್ದ ಗಣೇಶ ಮೂರ್ತಿಗಳು ಇಂದು ಫುಟ್‌ಪಾತ್‌ನಲ್ಲಿ ಬಿದ್ದಿವೆ. ಬಿಬಿಎಂಪಿಯ ಈ ಅವ್ಯವಸ್ಥೆಗೆ ಜನಸಾಮಾನ್ಯರು ಆಕ್ರೋಶ ಹೊರ ಹಾಕಿದ್ದಾರೆ.
ಫುಟ್‌ಪಾತ್, ಕೊಳಚೆ ನೀರಿನಲ್ಲಿ ಬಿದ್ದಿರುವ ಗಣೇಶನ ಮೂರ್ತಿಗಳು ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ಗಣೇಶೋತ್ಸವ ಆಚರಣೆ ಅನುವು ಮಾಡಿ ಕೊಟ್ಟಿತ್ತು. ಅದರಂತೆ ಜನರು ಸರಳವಾಗಿ ಮನೆಗಳಲ್ಲಿ ಹಬ್ಬ ಆಚರಿಸಿದ್ದರು. ಆದರೆ, ಇಂದು ಗಣೇಶ ಮೂರ್ತಿಗಳು ಕೆರೆ, ನದಿಗಳಲ್ಲಿ ಮುಳುಗದೇ ರಸ್ತೆ ಪಕ್ಕದ ಫುಟ್‌ಪಾತ್‌ನಲ್ಲಿ ಕಂಡು ಬಂದಿವೆ.
ಬಿಬಿಎಂಪಿ ಅವ್ಯವಸ್ಥೆ:
ಗಣೇಶ ವಿಸರ್ಜನೆಗೆ ಟ್ಯಾಂಕರ್ ಹಾಗೂ ಕಲ್ಯಾಣಿ ವ್ಯವಸ್ಥೆ ಆಗಿದೆ ಎಂದು ಬಿಬಿಎಂಪಿ ಹೇಳಿಕೊಂಡಿತ್ತು. ಆದರೆ, ಬೆಂಗಳೂರಿನ ಹೆಬ್ಬಾಳದ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿಲ್ಲ. ಟ್ಯಾಂಕರ್‌ನಲ್ಲಿ ಗಣೇಶ ಬಿಡಲು ವ್ಯವಸ್ಥೆ ಮಾಡಿದ್ದೇವೆ ಎಂದಿದ್ದರು. ಆದರೆ, ಟ್ಯಾಂಕರ್‌ನಲ್ಲಿ ಸಂಗ್ರಹಿಸಿದ್ದ ಗಣೇಶನ ಮೂರ್ತಿಗಳನ್ನು ರಸ್ತೆ ಬದಿಯಲ್ಲಿರುವ ಕೊಳಚೆಯ ಪಕ್ಕ ಹಾಕಿದ್ದಾರೆ. ಇನ್ನೂ ಕೆಲವು ಗಣೇಶನ ಮೂರ್ತಿಗಳು ಫುಟ್‌ಪಾತ್‌ನಲ್ಲಿ ಬಿದ್ದಿದ್ದರೆ, ಅದೆಷ್ಟೋ ಗಣೇಶನ ಮೂರ್ತಿಗಳು ವಿರೂಪಗೊಂಡಿವೆ.
ಬಿಬಿಎಂಪಿ ವಿರುದ್ಧ ಆಕ್ರೋಶ:
ವಿಘ್ನ ನಿವಾರಕನ ಮೂರ್ತಿಗಳು ಈ ರೀತಿ ದಿಕ್ಕಾಪಾಲಾಗಿ ಬಿದ್ದಿರೋದನ್ನು ಕಂಡು ಶಾಕ್ ಆಗಿರುವ ಜನರು, ಬಿಬಿಎಂಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಾವು ಶ್ರದ್ಧೆಯಿಂದ ಪೂಜೆ ಮಾಡಿ ವಿಸರ್ಜನೆ ಮಾಡಿದ ಗಣೇಶ ಇದೇನಾ? ನಮ್ಮ ಧಾರ್ಮಿಕ ಭಾವನೆಗೆ ಬೆಲೆ ಇಲ್ವಾ ? ಗಣೇಶ ವಿಸರ್ಜನೆಗೆ ನಾವೂ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದ್ದ ಬಿಬಿಎಂಪಿ ಮಾಡಿರುವ ವ್ಯವಸ್ಥೆ ಇದೇನಾ? ಟ್ರ್ಯಾಕ್ಟರ್ನಲ್ಲಿ ಡ್ರಮ್ ವ್ಯವಸ್ಥೆ ಮಾಡುವ ಬದಲು ಕಲ್ಯಾಣಿ ಸ್ವಚ್ಛ ಮಾಡಿಸಿದ್ದರೆ ಆಗುತ್ತಿರಲಿಲ್ಲವೇ ಎಂದು ಬಿಬಿಎಂಪಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಕಲಬುರಗಿ ಪಾಲಿಕೆ ಮೈತ್ರಿ ಕಸರತ್ತು: ಹೆಚ್ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್. ಅಶೋಕ್!