ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಉರುಳಿನಲ್ಲಿ ಸಿಕ್ಕಿಕೊಂಡು ಅಮಾನತುಗೊಂಡಿರುವ ಕೆ. ಆರ್ ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ನನ್ನ ವಿಚಾರಣೆ ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರಿಗೆ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ಜಾರಿನಿರ್ದೇಶನಾಲಯ (ಇ.ಡಿ) ಹಾಗೂ ಐಟಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ನೂರಾರು ಎಕರೆ ಜಮೀನು ಹೊಂದಿದ್ದು, ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಪಾವತಿಸದಿರುವುದು ಕಂಡು ಬಂದಿದೆ. ಎರಡು ತನಿಖಾ ಸಂಸ್ಥೆಗಳಿಗೂ ತನಿಖೆ ನಡೆಸುವಂತೆ ಪತ್ರ ಬರೆಯಲು ಮುಂದಾಗಿದ್ದಾರೆ. ಬೇನಾಮಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ಚಿಂತನೆ ನಡೆಸಿದೆ. ಕೋಟಿ ಕುಳ ಅಜಿತ್ ರೈ ನಾಲ್ಕು ಆಯಾಮಗಳಲ್ಲಿ ಅಧಿಕಾರಿಗಳ ತನಿಖೆಗೆ ಒಳಪಡಲಿದ್ದಾರೆ.
ತಹಶೀಲ್ದಾರ್ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ ?: ಅಜಿತ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅರೆ ಕ್ಷಣ ಥಂಡಾ ಹೊಡೆದಿದ್ದರು. ದುಬಾರಿ ಬೆಲೆಯ ಗೃಹೋಪಯೋಗಿ ವಸ್ತುಗಳು, ಬ್ರಾಂಡೆಂಡ್ ವಾಚ್ಗಳು, ಸಾವಿರಾರು ರೂಪಾಯಿ ಚಪ್ಪಲಿಗಳು ಹಾಗೂ ಇತರೆ ಲಕ್ಸುರಿ ವಸ್ತುಗಳು ಪತ್ತೆಯಾಗಿವೆ. ಹಾಗಾದರೆ ಯಾವ್ಯಾವ ವಸ್ತುಗಳು ದೊರಕಿದೆ ಎಂಬುದರ ಮಾಹಿತಿ ಇಲ್ಲಿದೆ.
ಅಜಿತ್ ಮನೆಯಲ್ಲಿ ಸಿಕ್ಕ ವಸ್ತುಗಳು ಯಾವುವು, ಎಷ್ಟೆಷ್ಟು ಗೊತ್ತಾ: ಅಜಿತ್ ರೈ ಹಾಲ್ನಲ್ಲಿ ಬರೋಬ್ಬರಿ 4.53 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಸ್ಮಾರ್ಟ್ ಟಿವಿ, ಹೋಂ ಥಿಯೇಟರ್, ಸೋಪಾ ಸೆಟ್ ಸೇರಿ 4.53 ಲಕ್ಷ ಮೌಲ್ಯದ ವಸ್ತುಗಳು, ಮಕ್ಕಳ ಸ್ಟಡಿ ರೂಂ ನಲ್ಲಿ 3.81 ಲಕ್ಷ ಮೌಲ್ಯದ ವಸ್ತುಗಳು, ಜಿಮ್ ಇಕ್ವಿಪ್ಮೆಂಟ್ಸ್, ಲ್ಯಾಪ್ ಟಾಪ್, ಯೋಗ ಮ್ಯಾಟ್ ಸೇರಿ ಸುಮಾರು 35 ತರದ ವಸ್ತುಗಳು ಪತ್ತೆಯಾಗಿವೆ. ಇಬ್ಬರು ಮಕ್ಕಳ ಬೆಡ್ ರೂಂ ನಲ್ಲಿ 1.26 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ ಬರೆ, ಬ್ಯಾಗ್ಗಳು ಸಿಕ್ಕಿವೆ.
ತಹಶೀಲ್ದಾರ್ ಬೆಡ್ ರೂಂನಲ್ಲಿ 4.28 ಲಕ್ಷ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಎಸಿ, ಟಿವಿ, ಬಟ್ಟೆಗಳು, ಬ್ಯಾಗ್ಗಳು ಸೇರಿ 4.28 ಲಕ್ಷ ಮೌಲ್ಯದ ವಸ್ತುಗಳು, ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆಯಲ್ಲಿ 5.83 ಲಕ್ಷ ಮೌಲ್ಯದ ವಸ್ತುಗಳು ಹಾಗೂ 50 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ.