ಕರ್ನಾಟಕ

karnataka

ETV Bharat / state

ನಾಳೆ ಲೋಕಾಯುಕ್ತರ ಮುಂದೆ ಮಾಡಾಳ್ ವಿರೂಪಾಕ್ಷಪ್ಪ ಹಾಜರ್​ ಸಾಧ್ಯತೆ.. ಶಾಸಕರ ನಿವಾಸಕ್ಕೆ‌ ಲೋಕಾಯುಕ್ತ ಪೊಲೀಸರ ಭೇಟಿ : ದಾಖಲಾತಿ ಪರಿಶೀಲನೆ

ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಪ್ರಕರಣ - ಶಾಸಕರ ಬೆಂಗಳೂರಿನ ಮನೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಖಲೆ ಪರಿಶೀಲನೆ - ನಾಳೆ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ

lokayukta-police-visited-the-residence-of-mla-madal-virupakshappa
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸಕ್ಕೆ‌ ಲೋಕಾಯುಕ್ತ ಪೊಲೀಸರು ಭೇಟಿ : ದಾಖಲಾತಿ ಪರಿಶೀಲನೆ

By

Published : Mar 8, 2023, 8:47 PM IST

ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರ ಬೆಂಗಳೂರಿನ ಸಂಜಯನಗರದ ನಿವಾಸಕ್ಕೆ ಲೋಕಾಯುಕ್ತ ಪೊಲೀಸರು ತೆರಳಿ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ಸ್​ಪೆಕ್ಟರ್​​ ಮಹದೇವಯ್ಯ ನೇತೃತ್ವದ ಅಧಿಕಾರಿಗಳ ತಂಡವು ಮಾಡಾಳ್ ವಿರೂಪಾಕ್ಷಪ್ಪ ನಿವಾಸಕ್ಕೆ ಬಂದು ಪರಿಶೀಲನೆ ನಡೆಸುತ್ತಿದೆ. ಲಂಚ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾತಿಗಳ ಬಗ್ಗೆ ಶೋಧಕಾರ್ಯ ನಡೆಸಲಾಗುತ್ತಿದೆ. ದಾಳಿ ವೇಳೆ ಸಿಕ್ಕಿದ್ದ ದಾಖಲಾತಿಗಳ ಸಂಬಂಧಿಸಿದಂತೆ ಪೂರಕ ಹೆಚ್ಚುವರಿ ದಾಖಲಾತಿ ಹಾಗೂ ಸಾಕ್ಷ್ಯಾಧಾರಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ‌ ಕೆಎಸ್​ಡಿಎಲ್​ಗೂ ಅಧಿಕಾರಿಗಳು ಪರಿಶೀಲನೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಾಳೆ ಲೋಕಾಯುಕ್ತ ಮುಂದೆ ಹಾಜರು: ಷರತ್ತುಬದ್ದ ನೀರಿಕ್ಷಣಾ ಜಾಮೀನು ಪಡೆದಿರುವ ವಿರೂಪಾಕ್ಷಪ್ಪ ಮಾಡಾಳ್ 48 ಗಂಟೆಗೊಳಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆ ನಾಳೆ ಲೋಕಾಯುಕ್ತ ಕಚೇರಿಗೆ ಹಾಜರಾಗುವ ಸಾಧ್ಯತೆಯಿದೆ. ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಪತ್ತೆ ಸಂಬಂಧಿಸಿದಂತೆ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಲಿದ್ದಾರೆ.

ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ವಿರೂಪಾಕ್ಷಪ್ಪ: ಇನ್ನು ಶಾಸಕ ವಿರೂಪಾಕ್ಷಪ್ಪನವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಿಂದ ಸ್ವಂತ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಶಾಸಕರ ಬೆಂಬಲಿಗರ ಮೂಲದಿಂದ ಮಾಹಿತಿ ಲಭಿಸಿದೆ.

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಸಿಕ್ಕ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಸ್ವಕ್ಷೇತ್ರ ಚನ್ನಗಿರಿಗೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭವ್ಯ ಸ್ವಾಗತ ಕೋರಿ ಅದ್ಧೂರಿ ಮೆರವಣಿಗೆ ನಡೆಸಿದ್ದರು. ಇದೀಗ ಶಾಸಕ ಮಾಡಾಳ್ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಮಾಡಾಳ್ ವಿರೂಪಾಕ್ಷಪ್ಪ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಕೋರ್ಟ್‌ ಆದೇಶದ ಪ್ರತಿ ಕೈ ಸೇರಿದ 48 ಗಂಟೆಗಳೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಶಾಸಕರಿಗೆ ಹೈಕೋರ್ಟ್​ ಸೂಚನೆ ನೀಡಿತ್ತು. ಜೊತೆಗೆ ಐದು ಲಕ್ಷ ರೂಪಾಯಿಗಳ ಬಾಂಡ್ ನೀಡಬೇಕು ಅಲ್ಲದೇ ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು ಎಂಬ ಷರತ್ತುಗಳನ್ನು ವಿಧಿಸಿತ್ತು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಬಿಜೆಪಿ ಉಚ್ಛಾಟನೆ ಮಾಡುತ್ತಾರೆ ಎಂಬ ವದಂತಿ ಬಗ್ಗೆ ಮಾತನಾಡಿದ ಮಾಡಾಳ್​, ನಮ್ಮ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ನಾನು ಮತ್ತೆ ದೋಷಮುಕ್ತನಾಗಿ ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಲೋಕಾಯುಕ್ತ ವಿಚಾರಣೆ: ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ABOUT THE AUTHOR

...view details