ಬೆಂಗಳೂರು:ಮೇ 15 ರವರೆಗೆ ಲಾಕ್ ಡೌನ್ ಮುಂದುವರಿಕೆ ಮಾಡುವ ಕೇಂದ್ರದ ಚಿಂತನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದ್ದು, ಮದ್ಯ ಮಾರಾಟಕ್ಕೆ ಅವಕಾಶ ನೀಡದೇ ವಲಯವಾರು ಲಾಕ್ ಡೌನ್ ಸಡಿಲಿಕೆಗೆ ಅವಕಾಶ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪಾಲ್ಗೊಂಡರು. ರಾಜ್ಯ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ವಿವರ ನೀಡಿ, ಇಲ್ಲಿಯವರೆಗೆ ಉತ್ತಮ ರೀತಿಯಲ್ಲಿಯೇ ಕ್ರಮ ಕೈಗೊಂಡಿದ್ದೇವೆ ಅದನ್ನು ಮುಂದುವರೆಸಲಿದ್ದೇವೆ ಎಂದು ಪ್ರಧಾನಿಗೆ ತಿಳಿಸಿದರು.
ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ಮುಂದುವರಿಕೆ ಕುರಿತು ನಡೆದ ಸಮಾಲೋಚನೆಯಲ್ಲಿ ಇನ್ನಷ್ಟು ದಿನ ಲಾಕ್ ಡೌನ್ ಮುಂದುವರಿಕೆ ಮಾಡಬೇಕಾಗಬಹುದು, ಮೇ 15ರ ವರೆಗೂ ಮುಂದುವರೆಸುವ ಚಿಂತನೆ ಇದೆ ಎನ್ನುವುದಕ್ಕೆ ಸಿಎಂ ಬಿಎಸ್ವೈ ಸಹಮತ ವ್ಯಕ್ತಪಡಿಸಿದರು.
ಆದರೆ, ಇದಕ್ಕೆ ಮುಂದುವರೆದಂತೆ ವಲಯವಾರು ವಿನಾಯಿತಿ ನೀಡಿ, ಗ್ರೀನ್ ಜೋನ್ ನಲ್ಲಿ ಆರ್ಥಿಕ ಚಟುವಟಿಕೆ ಆರಂಭಕ್ಕೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ಮದ್ಯ ಮಾರಾಟ ಮಾಡುವುದಿಲ್ಲ ಲಾಕ್ ಡೌನ್ ವಿನಾಯಿತಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಆದರೆ,ಸಿಎಂ ಮನವಿಗೆ ತಕ್ಷಣಕ್ಕೆ ಪ್ರಧಾನಿ ಮೋದಿ ಯಾವುದೇ ಭರವಸೆ ನೀಡಿಲ್ಲ. ರೆಡ್, ಆರೆಂಜ್ ಹಾಗೂ ಗ್ರೀನ್ ಜೋನ್ ಗಳಲ್ಲಿ ಹೊಸ ರೀತಿಯ ಮಾರ್ಗಸೂಚಿ ರಚಿಸುವ ಹೇಳಿಕೆ ನೀಡಿ ವೀಡಿಯೋ ಸಂವಾದಕ್ಕೆ ತೆರೆ ಎಳೆದರು.
ಪ್ರಧಾನಿ ಜೊತೆ ನಡೆದ ವೀಡಿಯೋ ಸಂವಾದದ ನಂತರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಲಿದ್ದಾರೆ. ಸಂಜೆ 4.30 ಕ್ಕೆ ನಡೆಯುವ ವಿಡಿಯೋ ಸಂವಾದದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒ, ಎಸ್ಪಿಗಳು, ಡಿಹೆಚ್ಒ ಗಳ ಜೊತೆ ಆಯಾ ಜಿಲ್ಲೆಗಳಲ್ಲಿನ ಕೊರೊನಾ ನಿಯಂತ್ರಣ ಕುರಿತು ಸಮಗ್ರವಾದ ಮಾಹಿತಿ ಕಲೆಹಾಕಲಿದ್ದಾರೆ.
ಲಾಕ್ ಡೌನ್ ಸಡಿಲಿಕೆ ನಂತರದ ಸ್ಥಿತಿಗತಿ ಹಾಗೂ ಮತ್ತಷ್ಟು ದಿನ ಲಾಕ್ ಡೌನ್ ವಿಸ್ತರಣೆ ಮಾಡಿದರೆ ಎದುರಾಗುವ ಸನ್ನಿವೇಶ ಕುರಿತು ಸಮಾಲೋಚನೆ ನಡೆಸಲಿದ್ದಾರೆ.