ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ದೊಡ್ಡದಿದೆ. ಪ್ರತಿದಿನದ ದುಡಿಮೆಯಿಂದ ಜೀವನ ಸಾಗಿಸುವ ಕಟ್ಟಡ ನಿರ್ಮಾಣ ಕಾರ್ಮಿಕರು, ಮನೆಗೆಲಸ, ಹಮಾಲಿ, ಟೈಲರ್, ಬೀಡಿ ಕಟ್ಟುವ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಹೀಗೆ ಒಂದೊಂದು ವಿಭಾಗ ಒಂದೊಂದು ರೀತಿಯ ಸಮಸ್ಯೆ ಎದುರಿಸುತ್ತಿದೆ. ಜೀವನ ನಿರ್ವಹಣೆಗೆ ಲಾಕ್ಡೌನ್ ಪೆಟ್ಟು ನೀಡಿದೆ.
ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಮಂದಿ ಬೀಡಿ ಕಟ್ಟುವ ಕಾರ್ಮಿಕರಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚು. ಮನೆ ನಿರ್ವಹಣೆ ಮಾಡುತ್ತಲೆ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಇವರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಈಗ ಲಾಕ್ಡೌನ್ ಘೋಷಣೆಯಾಗಿದ್ದು, ಉದ್ಯಮ ಸಂಪೂರ್ಣವಾಗಿ ನಿಂತಿದೆ. ದಿನಕ್ಕೆ 150 ರಿಂದ 200 ವರೆಗೆ ದುಡಿಯುತ್ತಿದ್ದ ಇವರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.