ಬೆಂಗಳೂರು: ವೈಜ್ಞಾನಿಕವಾಗಿ ಸರ್ವೇ ನಡೆಸದೆ ಹಾಗೂ ನೋಟಿಸ್ ಸಹ ನೀಡದೆ ಪ್ರಭಾವಿಗಳ ಜಮೀನು ಉಳಿಸಲು ಬಡವರ ಮನೆಗಳನ್ನು ಒಡೆಯಲು ಬಿಬಿಎಂಪಿ ಮುಂದಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಸತತ ಮಳೆಯಿಂದ ಮುಳುಗುವಂತಹ ಪರಿಸ್ಥಿತಿಗೆ ತಲುಪಿರುವ ರಾಜಧಾನಿಯನ್ನು ಉಳಿಸಲು ಪಣ ತೊಟ್ಟಿರುವ ಬಿಬಿಎಂಪಿ, ರಾಜಕಾಲುವೆ ವ್ಯಾಪ್ತಿಯ ಅಕ್ರಮ ಕಟ್ಟಡಗಳನ್ನು ಉರುಳಿಸಲು ಸೋಮವಾರದಿಂದ ಜೆಸಿಬಿಗಳ ಘರ್ಜನೆ ಆರಂಭಿಸಿದೆ.
ಮಾರತ್ತಹಳ್ಳಿ, ವರ್ತೂರು ಮುಖ್ಯ ರಸ್ತೆ, ಕಾಲುವೆ, ಚಲ್ಲಘಟ್ಟ, ಮಹದೇವಪುರ, ಹೂಡಿ, ಬಸವಣ್ಣನಗರ, ಸೀತಾರಾಮಪಾಳ್ಯ, ಕೆಆರ್ ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುರುತು ಮಾಡಿದ ಕಟ್ಟಡಗಳನ್ನು ಜೆಸಿಬಿಗಳ ಮೂಲಕ ಆಯಾ ವಲಯದ ಬಿಬಿಎಂಪಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಮಾಡಲಾಗುತ್ತಿದೆ.
ಮಾರತ್ತಹಳ್ಳಿಯ ಚಿನ್ನಪ್ಪ ಹಳ್ಳಿಯ ಎಇಸಿಎಸ್ ಲೇಔಟ್ ಮುಖ್ಯರಸ್ತೆಯಲ್ಲಿ ತಲೆ ಎತ್ತಿದ್ದ ಮೂರು ಅಂತಸ್ತಿನ ಕಟ್ಟಡವನ್ನು ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅರ್ಧ ತೆರವು ಮಾಡಲಾಯಿತು. ಈ ಕಟ್ಟಡದ ಮಾಲೀಕರು ಸಮೀಪದ ಕೆರೆಯ ಕಾಲುವೆ ಜಾಗವನ್ನು ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ಬಡವರ ಮನೆಯನ್ನು ಅಷ್ಟೇ ಓಡೆಯಲಾಗುತ್ತಿದೆ ಎನ್ನುವ ಆರೋಪ:ಅವೈಜ್ಞಾನಿಕವಾಗಿ ಸರ್ವೇ ಕಾರ್ಯ ಮಾಡಿ ಬಡವರ ಮನೆಗಳನ್ನು ಕೆಡವಲು ಬಿಬಿಎಂಪಿ ಮುಂದಾಗಿದೆ. ಪಕ್ಕದ ಅಪಾರ್ಟ್‌ಮೆಂಟ್ ಹಾಗೂ ಕಾಲೇಜು ಒತ್ತುವರಿ ಮಾಡಿಕೊಂಡಿರುವ ಜಾಗ ಸರ್ವೇ ಮಾಡದೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ನಮಗೆ ಯಾವುದೇ ನೋಟಿಸ್ ನೀಡದೆ ಮನೆ ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ಅಧಿಕಾರಿಗಳು ಪ್ರಭಾವಿಗಳ ಅಪಾರ್ಟ್‌ಮೆಂಟ್ ಹಾಗೂ ಕಾಲೇಜು ಒತ್ತುವರಿ ಆಗಿರುವ ಬಗ್ಗೆ ಕೆಂಪು ಗುರುತು ಮಾಡಿದ್ದರು. ಈಗ ಏಕಾಏಕಿ ಅವರ ಜಾಗಗಳನ್ನು ಒತ್ತುವರಿ ತೆರವು ಮಾಡದೇ ನಮ್ಮ ಮನೆಗಳನ್ನು ಒಡೆಯಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಲುವೆಯ ಮೇಲೆ ಕ್ರೀಡಾಂಗಣ:ಮಹದೇವಪುರದ ಬಸವನಗರದ ಗೋಪಾಲನ್ ಕಾಲೇಜಿನಿಂದ ರಾಜಕಾಲುವೆ ಒತ್ತುವರಿ ಆಗಿರುವ ಆರೋಪ ಇದ್ದು, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮೈದಾನ ನಿರ್ಮಾಣ ಮಾಡಲಾಗಿದೆ. ಇದರಿಂದ ಸುತ್ತಲೂ ಜಾಗದಲ್ಲಿ ಪ್ರವಾಹ ಉಂಟಾಗಿದ್ದ ಹಿನ್ನೆಲೆ ಸದ್ಯ ಬಿಬಿಎಂಪಿ ಅಧಿಕಾರಿಗಳ ಪೊಲೀಸರು ಸಹಯೋಗದೊಂದಿಗೆ ಮಾರ್ಕಿಂಗ್ ಮಾಡಿದ್ದಾರೆ.
ಚಲ್ಲಘಟ್ಟದ ಏರ್ಪೋರ್ಟ್ ಕಟ್ಟಡ ತಡೆಗೋಡೆ ತೆರವು:ಚಲ್ಲಘಟ್ಟದ ಏರ್ಪೋರ್ಟ್ ಕಟ್ಟಡ ಎಂದೇ ಗುರುತಿಸಿಕೊಂಡಿರುವ ಕಟ್ಟಡ ತಡೆಗೋಡೆಯನ್ನು ಇಂದು ಸಂಪೂರ್ಣವಾಗಿ ತೆರವು ಮಾಡಲಾಗಿದೆ. ನೀರು ಸುಗಮವಾಗಿ ಹರಿಯುವ ಈ ಗೋಡೆಯನ್ನು ತೆರವು ಮಾಡಲಾಗಿದ್ದು, ಶೀಘ್ರದಲ್ಲೇ ಕಾಲುವೆ ಜಾಗ ವಿಸ್ತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.