ಬೆಂಗಳೂರು: ಗಡಿ ಗ್ರಾಮಗಳ ಕನ್ನಡ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾವಣೆ ಮಾಡುವ ಕೇರಳ ಸರ್ಕಾರದ ಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಖಂಡಿಸಿದ್ದಾರೆ. ಅಲ್ಲದೆ, ಈಕುರಿತಂತೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ಗಡಿ ಪ್ರದೇಶಗಳಾದ ಕಾಸರಗೋಡು ಮತ್ತು ಮಂಜೇಶ್ವರ ಸೇರಿದಂತೆ ಕೆಲವು ತಾಲೂಕುಗಳ ಕನ್ನಡ ಗ್ರಾಮಗಳ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾವಣೆ ಮಾಡಲು ಕೇರಳ ಸರ್ಕಾರ ನಿರ್ಣಯ ಕೈಗೊಂಡು, ಆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಪ್ರದೇಶಗಳಲ್ಲಿ ಕನ್ನಡ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಶತಮಾನಗಳಿಂದಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇಲ್ಲಿನ ಜನ ರೂಢಿಸಿಕೊಂಡಿದ್ದಾರೆ. ಕನ್ನಡ ಪರಂಪರೆಯನ್ನು ಪಾಲಿಸಿಕೊಂಡು ಬಂದಿರುವ ಇಲ್ಲಿನ ಜನರ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆ. ಪ್ರತಿಯೊಂದು ಗ್ರಾಮದ ಹೆಸರೂ ಅಲ್ಲಿನ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ. ಮತ್ತು ಅಲ್ಲಿನ ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಿರುತ್ತದೆ. ಆ ಹೆಸರಿನಲ್ಲಿ ಒಂದು ಜನ ಸಮುದಾಯದ ಸಂಸ್ಕೃತಿ ಬೆಳೆದಿರುತ್ತದೆ. ಇದನ್ನು ಬದಲಾವಣೆ ಮಾಡುವುದರಿಂದ ಆ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ. ಈ ಗ್ರಾಮಗಳ ಹೆಸರುಗಳನ್ನು ಬದಲಾವಣೆ ಮಾಡುವ ಬಗ್ಗೆ ಅಲ್ಲಿನ ಸರ್ಕಾರ ಆ ಗ್ರಾಮಗಳ ಜನರೊಂದಿಗೆ ಚರ್ಚಿಸಿ ಕನಿಷ್ಠ ಅವರ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನೂ ಮಾಡದೆ, ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಪತ್ರದಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.