ಕರ್ನಾಟಕ

karnataka

ETV Bharat / state

ಎಲ್ಲಾ ಧರ್ಮ ಹಾಗೂ ವರ್ಗದ ಜನರು ಸಾಮರಸ್ಯದಿಂದ ಬಾಳಲಿ: ಡಿಕೆಶಿ - ಮಾಜಿ ಸಚಿವ ಎಚ್ ಎಂ ರೇವಣ್ಣ

ಅಪಾಯದಲ್ಲಿ ಧೈರ್ಯ, ಕಷ್ಟದಲ್ಲಿ ತಾಳ್ಮೆ, ನಷ್ಟದಲ್ಲಿ ಸಹನೆ, ತೊಂದರೆಯಲ್ಲಿ ಶಾಂತಿ, ದುಃಖದಲ್ಲಿ ಸಮಾಧಾನದಿಂದ ಇರಬೇಕು. ಆಗ ನಮಗೆ ಭಯ ಇರುವುದಿಲ್ಲ. ನಿಮಗೆ ಬದುಕಿನಲ್ಲಿ ಯಾರು ಸಹಾಯ ಮಾಡಿದ್ದಾರೆ ಅವರನ್ನು ಸ್ಮರಿಸಬೇಕು. ಉಪಕಾರ ಸ್ಮರಣೆ ಇಲ್ಲವಾದರೆ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

DK Shivakumar
ಡಿಸಿಎಂ ಡಿ.ಕೆ. ಶಿವಕುಮಾರ್

By

Published : Jun 10, 2023, 6:36 PM IST

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.

ಬೆಂಗಳೂರು:ಆದಿಚುಂಚನಗಿರಿ ಮಠದ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಕರ್ನಾಟಕದ ಪ್ರತಿಭೆಗಳನ್ನು ಸನ್ಮಾನಿಸಿದರು. ಆದಿ ಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ, ಕೃಷಿ ಸಚಿವ ಚಲುವರಾಯಸ್ವಾಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಸಚಿವ ಎಚ್ ಎಂ ರೇವಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಭಾಗವಹಿಸಿದ್ದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ''ಯಾವುದೇ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡುವಾಗ 'ಶತ್ರು ವಿನಾಶಾಯತಾ' ಎಂಬ ಮಾತು ಬರಬಾರದು. ಶುಭಂ ಕರೋತಿ ಕಲ್ಯಾಣಂ-ಆರೋಗ್ಯಂ ಧನ-ಸಂಪಾದಾ | ಜ್ಞಾನ ಶಕ್ತಿ ಸ್ವರೂಪಸ್ಯ ದೀಪ-ಜ್ಯೋತಿರ್-ಪ್ರಕಾಶಿತ' ಎಂದು ಶ್ಲೋಕ ಹೇಳಬೇಕು. ಅಂದರೆ ಎಲ್ಲರೂ ವಿದ್ಯಾವಂತರಾಗಿ, ಆರೋಗ್ಯ, ಆಯುಷ್ಯವಂತರಾಗಲಿ. ಇಂದು ಹಚ್ಚಿರುವ ಜ್ಯೋತಿ ನಿಮ್ಮನ್ನು ಕತ್ತಲಿಂದ ಬೆಳಕಿನತ್ತ ಕರೆದೊಯ್ಯಲಿ ಎಂದು ಎಂದು ಪ್ರಾರ್ಥಿಸುತ್ತೇನೆ ಎಂದರು.

ಆದಿಚುಂಚನಗಿರಿ ಮಠದ ವತಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಕರ್ನಾಟಕದ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.

ಮಠಗಳು, ಸಂಘ, ಸಂಸ್ಥೆಗಳು ಜನರಿಗೆ ಸೇವೆ ಮಾಡುತ್ತಾ ಬಂದಿವೆ. ಎಲ್ಲಾ ಧರ್ಮ ಹಾಗೂ ವರ್ಗದ ಜನರು ಸಾಮರಸ್ಯದಿಂದ ಬಾಳಲಿ. ಸಮಾಜದಲ್ಲಿ ಶಾಂತಿ ನೆಲೆಸಲಿ. ಸಮಾಜದ ಋಣ ತೀರಿಸಬೇಕು. ಆಗ ಬದುಕು ಸಾರ್ಥಕ ಎಂದು ಬಾಲಗಂಗಾಧರನಾಥ ಸ್ವಾಮಿಗಳು ಹೇಳಿದ್ದಾರೆ. ಸಮಾಜದ ಋಣ ತೀರಿಸುವಾಗ ಧರ್ಮದಿಂದ ತೀರಿಸಬೇಕು. ದೇವರು ನಿಮಗೆ ಕೊಟ್ಟಿರುವ ಅವಕಾಶದಲ್ಲಿ ನೀವು ಸಮಾಜದ ಋಣ ತೀರಿಸಿ. ಹಣ ಮತ್ತು ಸಂಪತ್ತು ನೀರಿನಂತೆ. ಬದುಕಿನ ದೋಣಿ ಸಾಗಲು ಎಷ್ಟುಬೇಕೊ ಅಷ್ಟು ಸಂಗ್ರಹ ಮಾಡಿಕೊಳ್ಳಬೇಕು. ಅತಿಯಾಗಿ ಆಸೆ ಮಾಡಿದರೆ, ದೋಣಿ ಮುಳುಗುತ್ತದೆ ಎಂದು ನಮ್ಮ ಸ್ವಾಮಿಗಳು ಹೇಳಿದ್ದಾರೆ. ಅವರು ಹಾಕಿಕೊಟ್ಟರು ಮಾರ್ಗದರ್ಶನದಲ್ಲಿ ನಾವು ಸಾಗಬೇಕಿದೆ ಎಂದು ವಿವರಿಸಿದರು.

ಅಪಾಯದಲ್ಲಿ ಧೈರ್ಯ, ಕಷ್ಟದಲ್ಲಿ ತಾಳ್ಮೆ, ನಷ್ಟದಲ್ಲಿ ಸಹನೆ, ತೊಂದರೆಯಲ್ಲಿ ಶಾಂತಿ, ದುಃಖದಲ್ಲಿ ಸಮಾಧಾನದಿಂದ ಇರಬೇಕು. ಆಗ ನಮಗೆ ಭಯ ಇರುವುದಿಲ್ಲ. ನಿಮಗೆ ಬದುಕಿನಲ್ಲಿ ಯಾರು ಸಹಾಯ ಮಾಡಿದ್ದಾರೆ ಅವರನ್ನು ಸ್ಮರಿಸಬೇಕು. ಉಪಕಾರ ಸ್ಮರಣೆ ಇಲ್ಲವಾದರೆ ಆತ್ಮಸಾಕ್ಷಿ ಒಪ್ಪುವುದಿಲ್ಲ. ಜನ ಕಷ್ಟ ಇದ್ದಾಗ ಮಾತ್ರ ಅಧಿಕಾರಿಗಳ ಬಳಿ ಬರುತ್ತಾರೆ. ಇದೇ ಕಾರಣಕ್ಕೆ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಮುಂದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ. ನೀವು ನ್ಯಾಯದ ಪೀಠದ ಸ್ಥಾನದಲ್ಲಿ ಇದ್ದಾಗ ನೀವು ನ್ಯಾಯಯತವಾಗಿ ಕೆಲಸ ಮಾಡಬೇಕು. 30ಕ್ಕೂ ಹೆಚ್ಚು ಮಂದಿ ಯುಪಿಎಸ್​ಸಿ ಪಾಸ್ ಮಾಡಿದ್ದು, ಅನೇಕರು ಇದರ ಕನಸು ಕಾಣುತ್ತಿದ್ದಾರೆ. ನೀವು ಕನಸು ಕಾಣಬೇಕು. ಆ ಕನಸು ನನಸಾಗಿಸಲು ಆಕಾಂಕ್ಷೆ ಇರಬೇಕು. ನಂತರ ಅದಕ್ಕಾಗಿ ಶ್ರಮಿಸಬೇಕು. ಶಿಸ್ತನ್ನು ಹೊಂದಿರಬೇಕು. ಆಗ ಯಶಸ್ವಿ ಜೀವನ ನಡೆಸಬಹುದು ಎಂದರು.

ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವತಿ ಮಾನವಃ । ಯಮಸ್ಯ ಕರುಣಾ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ ಎಂಬ ಶ್ಲೋಕ, ಸಹಾಯ ಮಾಡಬೇಕೆಂದು ಅನಿಸಿದಾಗ ಅದನ್ನು ತಕ್ಷಣವೇ ಮಾಡಬೇಕು. ಕಾರಣ ನಮ್ಮ ಮನಸ್ಸು ಚಂಚಲವಾಗುವ ಮುನ್ನ ಸಹಾಯ ಮಾಡಿ ಮುಗಿಸಿ ಎಂದು ತಿಳಿಸುತ್ತದೆ. ನಿಮ್ಮ ಬಳಿ ಅಧಿಕಾರ, ಹಣ ಇದ್ದಾಗ ನೀನು ಸಾಧ್ಯವಾದಷ್ಟು ಸಹಾಯ ಮಾಡಬೇಕು. ನಿಮಗೆ ಸಮಯ ಬಂದಾಗ ನಿಮಗೆ ಸಿಕ್ಕ ಅವಕಾಶದಲ್ಲಿ ಜನರಿಗೆ ಸಹಾಯ ಮಾಡಿ ಎಂದು ಸಲಹೆ ನೀಡಿದರು.

ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರನ್ನು ಭೇಟಿ ಮಾಡಿದರು.

ಸೌಜನ್ಯ ಭೇಟಿ:ಚಿತ್ರನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ಸೌಜನ್ಯದ ಭೇಟಿ ಮಾಡಿದ್ದರು.

ಇದನ್ನೂ ಓದಿ:ಕೆಆರ್​ಎಸ್ ನೀರಿನ ಮಟ್ಟ 80 ಅಡಿಗೆ ಕುಸಿತ: ಶತಮಾನದ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಗೋಚರ

ABOUT THE AUTHOR

...view details