ಬೆಂಗಳೂರು ಹೊರವಲಯದಲ್ಲಿ ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ ಬೆಂಗಳೂರು:ನಗರದ ಹೊರವಲಯದಲ್ಲಿರುವ ಬೊಮ್ಮನಹಳ್ಳಿಯ ಸಿಂಗಸಂದ್ರ ಎಇಸಿಎಸ್ ಲೇಔಟ್‌ನಲ್ಲಿ ಚಿರತೆ ಸಂಚಾರದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಮೈಕ್ ಮೂಲಕ ಚಿರತೆ ಇದೆ, ಜನ ಎಚ್ಚರಿಕೆಯಿಂದ ಓಡಾಟ ಮಾಡಬೇಕು ಎಂದು ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲುಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದೆ. ಪ್ರತಿಷ್ಠಿತ ಅಪಾರ್ಟ್ಮೆಂಟ್ಗಳ ಆವರಣ ಹಾಗೂ ಲೇಔಟ್ಗಳಲ್ಲಿ ಸಂಚಾರ ಮಾಡಿದೆ. ಕತ್ತಲಾಗುತ್ತಿದ್ದಂತೆ ಅಪಾರ್ಟ್ಮೆಂಟ್ನ ಮೆಟ್ಟಿಲು, ಲಿಫ್ಟ್ ಹಾಗೂ ಪಾರ್ಕಿಂಗ್ ಏರಿಯಾಗಳಲ್ಲಿ ಚಿರತೆ ಓಡಾಡಿದೆ. ಇದರ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿವೆ.
ಸ್ಥಳೀಯ ನಿವಾಸಿ ವೇಣು ಎಂಬವರು ಮಾತನಾಡಿ, ''ಚಿರತೆ ಎಇಸಿಎಸ್ ಲೇಔಟ್, ಕೂಡ್ಲುಭಾಗ, ಸಿಂಗಸಂದ್ರ, ಹೊಂಗಸಂದ್ರ, ಹೊಸಪಾಳ್ಯದೆಲ್ಲೆಲ್ಲ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸೆರೆ ಹಿಡಿಯಬೇಕು. 27ರಂದು ರಾತ್ರಿ 10 ಗಂಟೆಗೆ ಎಂ.ಎಸ್.ಧೋನಿ ಸ್ಕೂಲ್ ಹತ್ತಿರ ಕಾಣಿಸಿತ್ತು. 29ರಂದು ರಾತ್ರಿ 2 ಗಂಟೆ 55 ನಿಮಿಷಕ್ಕೆ ಹೊಂಗಸಂದ್ರ ಭಾಗದಲ್ಲಿ ಗೋಚರಿಸಿದೆ'' ಎಂದರು.
ಮತ್ತೋರ್ವ ಸ್ಥಳೀಯ ನಿವಾಸಿ ಪರಮೇಶ್ ಮಾತನಾಡಿ, "ಚಿರತೆ ಓಡಾಟದ ಬಗ್ಗೆ ಸಿಸಿಟಿವಿಯಲ್ಲಿ ಚೆಕ್ ಮಾಡಿದ್ದಾರೆ. ಡ್ರೋನ್ ಬೇಕು ಅನ್ನುತ್ತಿದ್ದಾರೆ. ಇಲ್ಲಿ ಸಾರ್ವಜನಿಕರು ಜಾಸ್ತಿ ಇದ್ದಾರೆ. ಬೆಳಿಗ್ಗೆ ವಯಸ್ಸಾದವರು ವಾಕ್ಗೆ ಬರುತ್ತಾರೆ. ಹಾಗಾಗಿ ಸ್ಥಳೀಯ ಅಧಿಕಾರಿಗಳು ಸ್ವಲ್ಪ ಕೇರ್ ತೆಗೆದುಕೊಂಡರೆ ಎಲ್ಲರಿಗೂ ಒಳ್ಳೆಯದು. ಈ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :ಬಂಡೀಪುರ: ಕಾಡಲ್ಲಿ ಒಟ್ಟಿಗೆ 5 ಚಿರತೆ ದರ್ಶನ... ರಾಷ್ಟ್ರೀಯ ಹೆದ್ದಾರಿ ದಾಟಿದ ವ್ಯಾಘ್ರ ಸಮೂಹ!