ಕರ್ನಾಟಕ

karnataka

ಶಿಕ್ಷಕರಿಗೆ ವಯೋಮಿತಿ ಬೇಡ, ಆದ್ಯತೆ ಮೇಲೆ ವ್ಯಾಕ್ಸಿನ್ ನೀಡಬೇಕು : ಸಭಾಪತಿ ಬಸವರಾಜ್ ಹೊರಟ್ಟಿ ಆಗ್ರಹ

By

Published : Jun 6, 2021, 6:45 PM IST

ರಾಜ್ಯದ ಎಲ್ಲಾ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸುವ ಬಗ್ಗೆ, ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಪ್ಯಾಕೇಜ್ ಪ್ರಕಟಿಸುವ ನನ್ನ ಕೋರಿಕೆಯನ್ನು ಪರಿಗಣಿಸಿ ಈಗಾಗಲೇ ಸೂಕ್ತ ಆದೇಶಗಳ ಮೂಲಕ ಕ್ರಮ ಕೈಗೊಂಡಿದ್ದೀರಿ..

horatti
horatti

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​ಗೆ ವ್ಯಾಕ್ಸಿನ್​ ನೀಡಿಕೆ ಸಂಬಂಧ ಪತ್ರ ಬರೆದಿದ್ದಾರೆ.

ಶಿಕ್ಷಕರು ದೇಶದ ಭದ್ರ ಬುನಾದಿ. ಆ ಕಾರಣಕ್ಕಾಗಿ ಶಿಕ್ಷಕರಿಗೆ ಯಾವುದೇ ವಯೋಮಿತಿಯ ನಿರ್ಬಂಧವನ್ನು ವಿಧಿಸದೇ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಶಿಕ್ಷಕರ ಬೇಡಿಕೆಯನ್ನು ಸರ್ಕಾರ ಆದ್ಯತೆಯ ಮೇಲೆ ಪರಿಗಣಿಸಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ನಾನು ತಮ್ಮನ್ನು ಒತ್ತಾಯಪೂರ್ವಕವಾಗಿ ಪುನಃ ಕೋರುತ್ತೇನೆ ಎಂದು ಈ ಪತ್ರದಲ್ಲಿ ಬರೆದಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದ ಪತ್ರ

ಪರಿಷತ್ ಸಭಾಪತಿ ವಿಸ್ತೃತ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಬರೆದಿದ್ದು, ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದ ಹಿನ್ನೆಲೆ ರಾಜ್ಯ ಸರ್ಕಾರ ಕೈಗೊಂಡ ಲಾಕ್‌ಡೌನ್ ಸಮಯೋಚಿತ ಹಾಗೂ ಅವಶ್ಯಕ ನಿರ್ಧಾರದ ಆರಂಭದ ದಿನಗಳಿಂದ ನನ್ನ ಗಮನಕ್ಕೆ ಬಂದಿರುವ ಹಲವು ವಿಷಯಗಳ ಕುರಿತು ಸಲಹೆಗಳ ರೂಪದಲ್ಲಿ ತಮಗೆ ಅನೇಕ ಪತ್ರಗಳನ್ನು ಬರೆದಿದ್ದೇನೆ. ಅವುಗಳಲ್ಲಿ ನಾನು ನೀಡಿರುವ ಬಹುತೇಕ ಸಲಹೆಗಳನ್ನು ತಾವು ಮಾನ್ಯ ಮಾಡಿ ಈಗಾಗಲೇ ಆದೇಶಗಳ ಮೂಲಕ ಜಾರಿಗೊಳಿಸಿದ್ದೀರಿ ಎಂದು ತಿಳಿಸಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದ ಪತ್ರ

ರಾಜ್ಯದ ಎಲ್ಲಾ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸುವ ಬಗ್ಗೆ, ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಪ್ಯಾಕೇಜ್ ಪ್ರಕಟಿಸುವ ನನ್ನ ಕೋರಿಕೆಯನ್ನು ಪರಿಗಣಿಸಿ ಈಗಾಗಲೇ ಸೂಕ್ತ ಆದೇಶಗಳ ಮೂಲಕ ಕ್ರಮ ಕೈಗೊಂಡಿದ್ದೀರಿ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಸ್ವಲ್ಪ ಭಾಗ ಅನುದಾನವನ್ನು ಕೋವಿಡ್ ಮೂಲ ಸೌಕರ್ಯ ಒದಗಿಸುವ ಕುರಿತು, ಎಲ್ಲಾ ಜಿಲ್ಲಾಸ್ಪತ್ರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳನ್ನು ಪೂರೈಸುವ ಬಗ್ಗೆ ಹಾಗೂ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಹಾಗೂ ಔಷಧಿಯನ್ನು ಉಚಿತವಾಗಿ ಒದಗಿಸುವ ಬಗ್ಗೆ ಹೀಗೆ ಹಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ತಾವು ಕಾರ್ಯರೂಪಕ್ಕೆ ತಂದಿರುವುದಕ್ಕೆ, ನಾನು ತಮಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹುಬ್ಬಳ್ಳಿ ಇವರು ನನಗೆ ಮನವಿ ನೀಡಿದ್ದು ಎಲ್ಲಾ ಶಿಕ್ಷಕರಿಗೂ ಕೂಡಲೇ ಕೋವಿಡ್ ನಿರೋಧಕ ಲಸಿಕೆ (ವ್ಯಾಕ್ಸಿನ್)ಯನ್ನು ಆದ್ಯತೆ ಮೇರೆಗೆ ನೀಡುವಂತೆ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ

ಈಗಾಗಲೇ ಶಿಕ್ಷಣ ಸಚಿವರು ತಿಳಿಸಿದಂತೆ ಜುಲೈ 1 ರಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಯಾವುದೇ ವಯೋಮಿತಿಯ ನಿರ್ಬಂಧವನ್ನು ಅನ್ವಯಿಸದೇ ವಿಶೇಷ ಪ್ಯಾಕೇಜ್‌ನಲ್ಲಿ ಕೋವಿಡ್ ನಿರೋಧಕ ಲಸಿಕೆ (ವ್ಯಾಕ್ಸಿನ್)ಗಳನ್ನು ಕೇಂದ್ರ ಸರಕಾರದಿಂದ ಪಡೆದುಕೊಂಡು ಅತೀ ತುರ್ತಾಗಿ ಎಲ್ಲಾ ಶಿಕ್ಷಕರಿಗೂ ವ್ಯಾಕ್ಸಿನ್ ನೀಡುವಂತಹ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ ಎಂದು ವಿನಂತಿಸಿದ್ದಾರೆ.

ಈ ಕುರಿತು ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೂ ಶಿಕ್ಷಕ ಸಂಘ ಸತತವಾಗಿ ಘನ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಆದರೆ ವ್ಯಾಕ್ಸಿನ್ ಇಲ್ಲದೇ ಸುಮಾರು ನೂರಾರು ಜನ ಶಿಕ್ಷಕರು ಎರಡನೇ ಅಲೆಗೆ ಸಿಲುಕಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಆದ ಕಾರಣ ಅವರಿಗೆ ಆದ್ಯತೆಯ ಮೇಲೆ ಲಸಿಕೆ ಕೊಟ್ಟು ಜೀವ ಉಳಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ ಎಂಬುದು ನನ್ನ ಭಾವನೆ ಹಾಗೂ ಒತ್ತಾಸೆಯಾಗಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ಮೂಲಕ ಸಹಾಯಧನ ಘೋಷಿಸಿರುವ ಸರಕಾರದ ಕ್ರಮವನ್ನು ನಾನು ಸ್ವಾಗತಿಸುತ್ತ ಇದು ಕಡಿಮೆ ಪ್ರಮಾಣದ್ದಾಗಿದೆ. ಇನ್ನೂ ಹೆಚ್ಚಿನ ಸಹಾಯಧನ ನೀಡಬೇಕೆಂದು ಹಾಗೂ ಶಿಕ್ಷಕರು ಕೋವಿಡ್ ಕೆಲಸದ ಮೇಲಿದ್ದಾಗ ಮೃತಪಟ್ಟರೆ ಅವರ ಅವಲಂಬಿತರೊಬ್ಬರಿಗೆ ಸರ್ಕಾರಿ ನೌಕರಿ ಮತ್ತು ಅವರಿಗೆ ದೊರೆಯಬೇಕಾದ ಪರಿಹಾರಧನವನ್ನು ನೀಡಬೇಕು.

ಈಗಾಗಲೇ ತಮಗೆ ಮೇ 4ರಂದು ಹುಬ್ಬಳ್ಳಿಯಲ್ಲಿ ತಾವು ಭೇಟಿಯಾದ ಸಮಯದಲ್ಲಿ ಖುದ್ದಾಗಿ ತಿಳಿಸಿರುವುದನ್ನು ಹಾಗೂ ಈ ಹಿಂದೆ ಹಲವಾರು ಬಾರಿ ಪತ್ರದ ಮೂಲಕ ತಮ್ಮನ್ನು ಕೋರಿದ್ದನ್ನು ಮತ್ತೊಮ್ಮೆ ತಮಗೆ ನೆನಪಿಸುತ್ತೇನೆ ಎಂದು ಹೇಳಿದ್ದಾರೆ.

For All Latest Updates

ABOUT THE AUTHOR

...view details