ಬೆಂಗಳೂರು:ರಾಜ್ಯದಲ್ಲಿ ಕಾನೂನು ಸೂವ್ಯವಸ್ಥೆ ಹಾಳಾಗಿದೆ ಎಂಬುದಕ್ಕೆ ನಗರದಲ್ಲಿ ಆಗಸ್ಟ್ ತಿಂಗಳಂದು ನಡೆದ ಗಲಭೆಯೆ ಕಾರಣ ಎಂದು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಗಲಭೆ ವಿಚಾರವಾಗಿ ನಿಯಮ 330ರ ಅಡಿ ಚರ್ಚೆ ಆರಂಭಿಸಲಾಯಿತು. ಆ.11ರಂದು ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ನಡೆದಿದೆ. ಸಾಕಷ್ಟು ಹಾನಿ ಆಗಿದ್ದು, ಗೃಹ ಇಲಾಖೆ ಸಂಪೂರ್ಣ ವೈಫಲ್ಯ ಇಲ್ಲಿ ಸ್ಪಷ್ಟವಾಗಿದೆ. ಗುಪ್ತಚರ ಇಲಾಖೆ ಸ್ಪಷ್ಟ ವೈಫಲ್ಯವೂ ಇದಕ್ಕೆ ಕಾರಣ. ಶಾಸಕರ ಮನೆ, ಕಚೇರಿ, ಪೊಲೀಸ್ ಠಾಣೆ ಧ್ವಂಸವಾಗಿದೆ. 50ಕ್ಕೂ ಹೆಚ್ಚು ಪೊಲೀಸರು, ನೂರಾರು ಜನ ಗಾಯಗೊಂಡಿದ್ದಾರೆ. ಗೋಲಿಬಾರ್ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಲ್ಲಿ ಮುಂಜಾಗ್ರತೆ ಕೈಗೊಳ್ಳಬಹುದಿತ್ತು. ಸಾರ್ವಜನಿಕ ಬದುಕಿನಲ್ಲಿ ನಾನು ಇಂತಹ ಘಟನೆ ಕಂಡಿಲ್ಲ. ಆಡಳಿತ, ಪ್ರತಿಪಕ್ಷ ನಾಯಕರು ಭೇಟಿಕೊಟ್ಟು ಮನವಿ ಮಾಡಿದ್ದಾರೆ. ಈಗಲೂ ಪರಿಸ್ಥಿತಿ ತಿಳಿಗೊಂಡಿಲ್ಲ. ಹೊರಗಿನವರು ಬಂದು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇಲ್ಲಿ ಇಷ್ಟು ಗಲಾಟೆ ಆಗುವ ಮಾಹಿತಿ ಇಲ್ಲದ ಸರ್ಕಾರ ಸ್ಪಷ್ಟವಾಗಿ ನಿರ್ಲಕ್ಷ್ಯ ತೋರಿಸಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಸಾಕಷ್ಟು ಮುಗ್ದರಿಗೆ ಅನ್ಯಾಯವಾಗುತ್ತಿದೆ. 73 ಎಫ್ಐಆರ್ ಹಾಕಲಾಗಿದೆ. 400ಕ್ಕೂ ಹೆಚ್ಚು ಮಂದಿ ಜೈಲಲ್ಲಿದ್ದಾರೆ. ಅಮಾಯಕರನ್ನು ಬಂಧಿಸಲಾಗಿದೆ. ಕಠಿಣ ಕಾನೂನಿನ ಅಡಿ ಜೈಲಿಗಟ್ಟಿದ್ದಾರೆ. ತಪ್ಪಿತಸ್ತರಿಗೆ ಶಿಕ್ಷೆ ಆದರೆ ನಮ್ಮ ವಿರೋಧ ಇಲ್ಲ. ಆದರೆ. ಗಲಭೆಗೆ ಸಂಬಂಧ ಇಲ್ಲದ ಅಮಾಯಕರಿಗೆ ಶಿಕ್ಷೆ ಆಗಬಾರದು ಎಂದರು.
ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್ ಮಾತನಾಡಿ, ಘಟನೆ ಏಕೆ ಆಯಿತು ಅನ್ನುವುದನ್ನು ಯಾರೂ ಗಮನಿಸುತ್ತಿಲ್ಲ. ಒಂದು ಪೋಸ್ಟ್ ಮೊಬೈಲ್ಗೆ ಆರೋಪಿಗೆ ಒಬ್ಬರಿಂದ ಬಂದಿದೆ. ಆತ ಅದನ್ನು ಇನ್ನೊಬ್ಬರಿಗೆ ಕಳಿಸಿದ್ದಾನೆ. ಇವನಿಗೆ ಎಲ್ಲಿಂದ ಈ ವ್ಯಂಗ್ಯಚಿತ್ರ ಬಂತು ಅನ್ನುವುದನ್ನು ಕೇಳಿದರೆ ಪೊಲೀಸ್ ಆಯುಕ್ತರು ಸೈಬರ್ ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ ಎಂದಿದ್ದಾರೆ. ಒಂದೂವರೆ ತಿಂಗಳು ಬೇಕಾ ಈ ತನಿಖೆಗೆ? ಇಲ್ಲಿ ಸಾಕಷ್ಟು ವೈಫಲ್ಯ ಇದೆ ಶಂಕೆ ವ್ಯಕ್ತಪಡಿಸಿದರು.
ಸವಿಸ್ತಾರವಾಗಿ ಘಟನೆಯ ವಿವರ ಒದಗಿಸಿದರು. ಇಲ್ಲಿನ ಸಾಮಾಜಿಕ, ಆರ್ಥಿಕ ಸ್ಥಿತಿ ಸರಿಯಿಲ್ಲ. ಬಡ, ಮಧ್ಯಮ ವರ್ಗದ ಜನ ವಾಸವಾಗಿದ್ದಾರೆ. ಕೋವಿಡ್ನಿಂದಾಗಿ ಆರು ತಿಂಗಳಿಂದ ಕೆಲಸ ಇರಲಿಲ್ಲ. ಎರಡು ತಿಂಗಳಿಂದ ಒಂದೊಂದು ಮನೆಯಿಂದ ಮೂರು ಜನರನ್ನು ಕರೆದೊಯ್ದಿದ್ದೀರಿ. ಹೀಗಾದೆ ಬದುಕು ಹೇಗೆ ಎಂದು ಪ್ರಶ್ನಿಸಿದರು.
ಈ ಮಧ್ಯೆ ಬಿಜೆಪಿ ಸದಸ್ಯರು ನಿಮ್ಮದೇ ಪಕ್ಷದ ಒಬ್ಬ ದಲಿತ ಶಾಸಕನ ಮನೆ ಮೇಲೆ ದಾಳಿ ನಡೆದಿದೆ, ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಅನಗತ್ಯವಾಗಿ ಸದನದ ಕಾಲ ಹರಣ ಮಾಡುತ್ತಿದ್ದೀರಿ. ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದಾಗ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಬಿ.ಕೆ. ಹರಿಪ್ರಸಾದ್ ಮಾತನಾಡಿ, ಶಾಸಕರ, ಠಾಣೆ ಮೇಲೆ ದಾಳಿ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಮೊಸಳೆ ಕಣ್ಣೀರು ಬೇಡ ಅಂದಾಗ ಮತ್ತೆ ಬಿಜೆಪಿ ಸದಸ್ಯರು ಗಲಾಟೆ ನಡೆಸಿದರು. ಗದ್ದಲದ ಮಧ್ಯೆಯೇ ಹರಿಪ್ರಸಾದ್ ಮಾತು ಮುಂದುವರಿಸಿ ದಲಿತರ ಮೇಲೆ ನಡೆದ ದಾಳಿ, ಅತ್ಯಾಚಾರ ಪ್ರಕರಣಗಳ ವಿವರ ನೀಡಿದರು.
ಬೆಂಕಿ ಹಚ್ಚಿದವರ ಪರ ಕಾಂಗ್ರೆಸ್ ವಾದ ಮಾಡಿ, ದಲಿತ ವಿರೋಧಿ ಆಗಬೇಡಿ ಎಂದು ಬಿಜೆಪಿ ಸದಸ್ಯರು ಆಕ್ರೋಶ ಮುಂದುವರಿಸಿದರು. ಹರಿಪ್ರಸಾದ್ ಮಾತು ಮುಂದುವರಿಸಿ ಇದು ಪೂರ್ವ ನಿಯೋಜಿತ ಕೃತ್ಯ ಎಂದರು. ಸಿಸಿ ಪಾಟೀಲರು ಮುಸ್ಲಿಮರ ಕೈವಾಡ ಇದೆ ಎಂದರು. ಮಂತ್ರಿಗಳು ವ್ಯತಿರಿಕ್ತ ಹೇಳಿಕೆ ನೀಡಿ ಗಲಾಟೆ ಆಗುವಂತೆ ಮಾಡಿದರು. ತಡೆಯುವ ಪ್ರಯತ್ನ ಮಾಡಬಹುದಿತ್ತು. ಇದು ಕೋಮು ಸಂಘರ್ಷ ಗಲಭೆ ಅಲ್ಲ. ಒಂದು ಪೋಸ್ಟ್ನಿಂದಾಗಿ ಗಲಾಟೆ ಆಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ ಇಂತಹ ಸ್ಥಿತಿ ಉಂಟಾಗುತ್ತಿರಲಿಲ್ಲ. ಹೈಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಆರ್.ಬಿ. ತಿಮ್ಮಾಪೂರ್ ಮಾತನಾಡಿ, ದಲಿತ ಶಾಸಲರ ನಿವಾಸದ ಮೇಲೆ ದಾಳಿ ಆಗಿದೆ. ಇದಕ್ಕೆ ಯಾರು ಹೊಣೆ ಹೊರುತ್ತೀರಿ? ಪೂರ್ವನಿಯೋಜಿತ ಅಂತ ಒಬ್ಬರು, ಅನಿರೀಕ್ಷಿತ ಅಂತ ಇನ್ನೊಬ್ಬರು ಹೇಳುತ್ತಾರೆ. ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿದೆ. ನಾಚಿಕೆ ಆಗಬೇಕೆಂದಾಗ ಮತ್ತೆ ಗದ್ದಲ ಆರಂಭವಾಯಿತು. ನಿಯಂತ್ರಣ ಸಾಧ್ಯವಾಗದಿದ್ದಾಗ ಕಲಾಪವನ್ನು ಮತ್ತೆ ಹತ್ತು ನಿಮಿಷ ಕಾಲ ಮುಂದೂಡಲಾಯಿತು. ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.