ಬೆಂಗಳೂರು: ಉತ್ತರ ಪ್ರದೇಶದ ಲಖಿಂಪುರ ಘಟನೆ ಅಂದರೆ ದೇಶದಲ್ಲೇ ಅಲ್ಲೋಲ-ಕಲ್ಲೋಲ ಉಂಟುಮಾಡುವ ಹಾಗೂ ರೈತರ ಮೇಲೆ ಸರ್ಕಾರದ ದೌರ್ಜನ್ಯ ಹೇಗೆ ನಡೆದಿದೆ ಎನ್ನುವುದನ್ನು ತೋರಿಸುತ್ತದೆ ಎಂದು ರಾಜ್ಯಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರಗಳು ರೈತರ ವಿರುದ್ಧ ನಿರಂತರವಾಗಿ ದೌರ್ಜನ್ಯ ನಡೆಸುತ್ತಿವೆ. ಸರ್ಕಾರ ಜಾರಿಗೆ ತಂದಿರುವ ಜನ, ರೈತ ವಿರೋಧಿ ಕಾನೂನು ಹಿಂಪಡೆಯುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವರ ಪುತ್ರ ಈ ಹಿಂದೆ ರೈತರ ಬಳಿ ನಿಮಗೆ ಪಾಠ ಕಲಿಸುತ್ತೇನೆ ಎಂದಿದ್ದ. ಈಗ ಆರು ಮಂದಿ ರೈತರ ಬಲಿ ಪಡೆದಿದ್ದಾನೆ. ಕಾರಲ್ಲಿ ಸಚಿವರ ಪುತ್ರ ಇದ್ದ ಎಂಬ ಮಾಹಿತಿ ಅವರ ಕುಟುಂಬದ ಸದಸ್ಯರೇ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ ಕುಮ್ಮಕ್ಕು ನೀಡಿ ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. ಹರಿಯಾಣ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ರೈತರ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ.
ಮೃತರಿಗೆ ಸಾಂತ್ವನ ಹೇಳಲು ಹೊರಟ ನಮ್ಮ ನಾಯಕಿ ಪ್ರಿಯಂಕಾ ಗಾಂಧಿ ಅವರನ್ನು ಬಲವಂತವಾಗಿ ಬಂಧಿಸಲಾಗಿದೆ. ಬಂಧನವಾಗಿ 40 ಗಂಟೆಯಾಗಿದೆ. ಅವರಿಗೆ ನೋಟಿಸ್ ನೀಡಿಲ್ಲ. ಬಾಯಿಮಾತಿಗೆ ಆದೇಶ ಬಂದಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಲಕ್ಷ್ಮೀಪುರ ಸಮೀಪವೇ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ರೈತರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಲಿಲ್ಲ. ಪ್ರಿಯಂಕಾ ಗಾಂಧಿ ತಮ್ಮ ಬಂಧನ ವಿಚಾರವಾಗಿ ಗಮನ ಸೆಳೆದರೂ ಬೆಲೆ ಕೊಟ್ಟಿಲ್ಲ. ಪ್ರಿಯಂಕಾ ಗಾಂಧಿ ಬಂಧನ ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದಕ್ಕೂ ಬೆಲೆ ಸಿಗುತ್ತಿಲ್ಲ. ಕಾನೂನು ಗೊತ್ತಿದ್ದೂ ಪ್ರಕರಣ ದಾಖಲಿಸುತ್ತಿಲ್ಲ. ರೈತರ ವಿರುದ್ಧ ಮಾತನಾಡುವುದು, ಪ್ರಚೋದಿಸುವವರ ವಿರುದ್ಧ ಸೆಡಿಷನ್ ಪ್ರಕರಣ ದಾಖಲಿಸಬೇಕು. ಆದರೆ ರೈತರು, ಅವರ ಪರ ಹೋರಾಡುವವರ ಮೇಲೆ ಕೇಸು ದಾಖಲಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.