ಬೆಂಗಳೂರು :ಸಿಲಿಕಾನ್ ಸಿಟಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಸುತ್ತಮುತ್ತಲಿನ ಗ್ರಾಮಗಳಲ್ಲೂ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಹೀಗಾಗಿ, ಅಭಿವೃದ್ಧಿ ಒಂದೆಡೆಯಾದರೆ ಇದರ ಫಲವಾಗಿ ಪರಿಸರ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ.
ಸರ್ಜಾಪುರ ರಸ್ತೆ ಬಳಿಯ ಹಾಡೋಸಿದ್ದಾಪುರ ಕೆರೆಯೂ ಅಭಿವೃದ್ಧಿಯ ಅಡ್ಡಪರಿಣಾಮಗಳಿಗೆ ನಲುಗಿ ಹೋಗಿತ್ತು. ಒಳಚರಂಡಿ ನೀರು ಕೆರೆ ನೀರಿಗೆ ಸೇರಿ ದುರ್ವಾಸನೆ ಬರುತ್ತಿತ್ತು.
ಕೆರೆ ಬಳಿಗೆ ಈಜಾಡಲು ಬರುತ್ತಿದ್ದ ಯುವಕರು, ಹುಲ್ಲು ಮೇಯಲು ಬರುತ್ತಿದ್ದ ಹಸು, ಕರು, ಕುರಿಗಳು, ವಾಯು ವಿಹಾರಕ್ಕಾಗಿ ಬರುತ್ತಿದ್ದ ಗ್ರಾಮಸ್ಥರೂ ಈ ಕೆರೆಯತ್ತ ತಲೆ ಹಾಕದಂತಾಗಿತ್ತು.
ಆದರೆ, ಭೂಮಿ ನೆಟ್ವರ್ಕ್ ಕಾಲೇಜ್‌ನ ಮುಖ್ಯಸ್ಥರಾದ ಸೀತಾ ಅವರು ಕೆರೆ ಸಂರಕ್ಷಣೆಗೆ ಮುಂದಾಗಿ, ಕೆರೆ ಸಂರಕ್ಷಕರಾದ ಆನಂದ್ ಮಲ್ಲಿಗವಾಡ ಅವರನ್ನು ಸಂಪರ್ಕಿಸಿದಾಗ, ಆನಂದ್ ಕೆರೆಯ ಅಭಿವೃದ್ಧಿಗಾಗಿ ವಿನೂತನ ಮಾದರಿಯಲ್ಲಿ ದೇಶದಲ್ಲೇ ಮೊದಲ ಪ್ರಯತ್ನ ಮಾಡಿದರು.
ಕೋಟ್ಯಂತರ ವೆಚ್ಚದ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮಾಡದೆ, ವೆಟ್ ಲ್ಯಾಂಡ್ ಸಿಸ್ಟಂ ಜಾರಿಗೆ ಸಿಮೆಂಟ್‌ಗಳ ಬಳಕೆ ಮಾಡದೆ, ಅತ್ಯಂತ ನೈಸರ್ಗಿಕ ಮಾದರಿಯಲ್ಲಿ "ನ್ಯಾಚುರಲ್ ಬಯಲಾಜಿಕಲ್ ಸೀವೇಜ್ ಟ್ರಿಟ್ಮೆಂಟ್" ಅಂದರೆ ನೈಸರ್ಗಿಕ ವಿಧಾನದಲ್ಲಿ ಚರಂಡಿ ನೀರು ಸಂಸ್ಕರಿಸುವ ವಿಧಾನವನ್ನು ಈ ಕೆರೆಯಲ್ಲಿ ಅಳವಡಿಸಿದರು.
ಒಟ್ಟು 35 ಎಕರೆ ಇರುವ ಹಾಡೋಸಿದ್ದಾಪುರ ಕೆರೆಯು ಕಳೆದ ಐದು ವರ್ಷಗಳಿಂದ ಚರಂಡಿ ನೀರು ತುಂಬಿ ಕೊಳಚೆ ನೀರಿನ ಕೊಳವಾಗಿತ್ತು. ಬಳಿಕ 46 ಲಕ್ಷ ವೆಚ್ಚದಲ್ಲಿ ಕೆರೆಯ ನೀರು ಸಂಪೂರ್ಣವಾಗಿ ಖಾಲಿ ಮಾಡಿ ಹೂಳು ತೆಗೆದು, ಕೆರೆಯ ನಡುವೆ ಮಣ್ಣಿನಲ್ಲೇ ಪ್ರತ್ಯೇಕ ಗೋಡೆ ರೀತಿ ನಿರ್ಮಾಣ ಮಾಡಿ, ಮಳೆ ನೀರು ಹಾಗೂ ಚರಂಡಿ ನೀರು ಬಂದು ಸೇರುವ ಜಾಗವನ್ನು ಪ್ರತ್ಯೇಕಿಸಲಾಗಿದೆ.
ಚರಂಡಿ ನೀರು ಬಂದು ಸೇರುವ ಜಾಗದಲ್ಲಿ ನೀರನ್ನು ತಿಳಿ ಮಾಡಲು ಕೆಮಿಕಲ್, ವಿದ್ಯುತ್ ಅಥವಾ ಜನರ ಸಹಾಯ ಇಲ್ಲದಂತೆ ಕೋಲು, ಗಿಡಗಳು, ಜಲ್ಲಿ, ಮಣ್ಣು, ಮರಳಿನ ಮೂಲಕ ನೈಸರ್ಗಿಕ ವಿಧಾನದಲ್ಲಿ ಶುದ್ಧೀಕರಿಸಲಾಗುತ್ತಿದೆ.
ನೈಸರ್ಗಿಕ ಮಾದರಿಯಲ್ಲಿ ಕೆರೆ ನೀರು ಶುದ್ಧೀಕರಣ 2020ರ ಫೆಬ್ರವರಿಯಿಂದ ಜೂನ್‌ವರೆಗಿನ ಲಾಕ್‌ಡೌನ್ ಸಮಯದಲ್ಲಿ ಈ ಕೆರೆಯ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಚರಂಡಿ ನೀರು ಈಗ ವಾಸನೆ ಬರುತ್ತಿಲ್ಲ. ನೈಸರ್ಗಿಕ ವಿಧಾನದಲ್ಲಿ ಸಂಸ್ಕಾರವಾಗುತ್ತಿದೆ. 10 ವರ್ಷ ಈ ವಿಧಾನ ಕೆಲಸ ಮಾಡಲಿದೆ. ನದಿಯಲ್ಲಿ ಹರಿದು ಹೋಗುವ ನೀರು ಶುದ್ಧವಾಗುವ ಮಾದರಿಯಲ್ಲೇ ಕೆರೆಯ ನೀರನ್ನು ಸಂಸ್ಕರಿಸಲಾಗುತ್ತಿದೆ. ಇದು ದೇಶದಲ್ಲೇ ಪ್ರಥಮ ಪ್ರಯತ್ನ ಎಂದು ಕೆರೆ ಸಂರಕ್ಷಕರಾದ ಆನಂದ್ ಮಲ್ಲಿಗವಾಡ ಈಟಿವಿ ಭಾರತ್‌ಗೆ ತಿಳಿಸಿದರು.
ಇದೀಗ ಈ ಕೆರೆ ಮಳೆ ನೀರಿಂದ ತುಂಬಿ ಕಂಗೊಳಿಸುತ್ತಿದೆ. ಕೋಡಿ ಹರಿಯುತ್ತಿದೆ. ಈ ಕೆರೆಯಲ್ಲಿ ವೆಟ್ ಲ್ಯಾಂಡ್ ಏರಿಯಾ ಮಾಡಲಾಗಿದೆ. ಸ್ಥಳೀಯ ನೀರು ಶುದ್ಧ ಮಾಡುವ ಗಿಡಗಳನ್ನು ಹಾಕಲಾಗಿದೆ. ತಾವರೆ ಬೆಳೆಸಲಾಗುತ್ತಿದೆ. ಪುಟ್ಟ ಪುಟ್ಟ ಐಲ್ಯಾಂಡ್ ಮಾಡಲಾಗಿದೆ. 55ಕ್ಕೂ ಹೆಚ್ಚು ವಿಧದ ಪಕ್ಷಿಗಳು ಬರುತ್ತಿವೆ. ಸುತ್ತಮುತ್ತಲೂ ಬೋರ್‌ವೆಲ್ ಮರು ಪೂರಣಕ್ಕೆ ಈ ಕೆರೆ ಸದ್ಯ ಸಹಾಯಕವಾಗಿದೆ. ಅಭಿವೃದ್ಧಿ, ಪ್ರಭಾವಿ ಬಿಲ್ಡರ್ಗಳ ಪ್ರಭಾವಕ್ಕೆ ಒತ್ತುವರಿಯಾಗಿದ್ದ, ಕಲುಷಿತವಾಗಿದ್ದ ಕೆರೆ ಮತ್ತೆ ಜೀವಂತಿಕೆಯಿಂದ ಕಂಗೊಳಿಸುತ್ತಿದೆ.
ನೈಸರ್ಗಿಕ ಮಾದರಿಯಲ್ಲಿ ಕೆರೆ ನೀರು ಶುದ್ಧೀಕರಣ ಕೆರೆ ಅಭಿವೃದ್ಧಿ ಬಗ್ಗೆ ಮಾತನಾಡಿದ ಸ್ಥಳೀಯರಾದ ಶ್ರೀನಿವಾಸ್, ಐದು ವರ್ಷದ ಹಿಂದೆ ಚೆನ್ನಾಗಿತ್ತು. ಅಪಾರ್ಟ್‌ಮೆಂಟ್‌ಗಳು ಆರಂಭ ಆದ ಮೇಲೆ, ನೇರವಾಗಿ ಕೆರೆಗೇ ಸೀವೇಜ್ ನೀರು ಬಿಡುತ್ತಿದ್ದರು. ಹಸು, ಕುರಿಗಳನ್ನು ಈ ಕಡೆಗೆ ಮೇಯಿಸಲು ತರಲು ಸಾಧ್ಯವಾಗುತ್ತಿರಲಿಲ್ಲ. ಆನಂದ್ ಅವರ ಸಹಾಯದಿಂದ ಮರು ಜೀವ ಕೊಡಲಾಯಿತು. ಜನ ಈಗ ಮತ್ತೆ ಸೈಕ್ಲಿಂಗ್, ವಾಕಿಂಗ್‌ಗೆ ಬರುತ್ತಿದ್ದಾರೆ ಎಂದರು.
ಕಡಿಮೆ ವೆಚ್ಚದಲ್ಲಿ ನೀರು ಸಂಸ್ಕರಿಸುವ ವಿಧಾನವನ್ನು ಈ ಕೆರೆಯಲ್ಲಿ ಅಳವಡಿಸಿರುವ ಆನಂದ್, ಅತ್ಯಂತ ಯಶಸ್ವಿಯಾಗಿ ನೀರು ಸಂಸ್ಕರಿಸಲಾಗುತ್ತಿದೆ. ಮತ್ತೆ ಊರಿನ ಯುವಕರು ಈಜಲು, ಹಲವಾರು ವಿಧದ ಪಕ್ಷಿಗಳಿಗೂ ಈ ಕೆರೆ ಆವಾಸ ಸ್ಥಾನವಾಗಿದೆ ಎಂದು ಖುಷಿಪಟ್ಟರು.