ಬೆಂಗಳೂರು:ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ನೀಲಿ ಡ್ರಮ್ ನಲ್ಲಿ ಅಪರಿಚಿತ ಮಹಿಳೆ ಶವ ದೊರೆತ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿರುವ ರೈಲ್ವೇ ಪೊಲೀಸರು ವೇಲ್ ನಿಂದ ಮಹಿಳೆ ಕುತ್ತಿಗೆ ಬಿಗಿದು ಹಂತಕರು ಕೊಲೆ ಮಾಡಿರುವ ಬಗ್ಗೆ ಪೋಸ್ಟ್ ಮಾರ್ಟಮ್ ವರದಿಯಿಂದ ತಿಳಿದುಕೊಂಡಿದ್ದಾರೆ.
ದಿನಕ್ಕೆ ಲಕ್ಷಾಂತರ ಪ್ರಯಾಣಿಕರು ಓಡಾಡುವ ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ -1 ರಲ್ಲಿ ನೀಲಿ ಬಣ್ಣದ ಡ್ರಮ್ ನಲ್ಲಿ ಬಟ್ಟೆ ರಾಶಿಯೊಂದಿಗೆ ಅಪರಿಚಿತ ಮಹಿಳೆ ಶವ ಬುಧವಾರ ಪತ್ತೆಯಾಗಿತ್ತು. ರಕ್ತಸಿಕ್ತವಾಗಿ ಸಿಕ್ಕ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಶವ ಪರೀಕ್ಷೆ ನಡೆಸಿದ ವೈದ್ಯರು ರೈಲ್ವೇ ಪೊಲೀಸರಿಗೆ ವರದಿ ನೀಡಿದ್ದಾರೆ. ಕುತ್ತಿಗೆಯಿಂದ ಬಿಗಿದು ಮಹಿಳೆಯನ್ನು ಕೊಲೆ ಮಾಡಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೃತ ಮಹಿಳೆಯನ್ನು ಉತ್ತರ ಭಾರತ ಮೂಲದವರು ಎಂದು ಹೇಳಲಾಗುತ್ತಿದೆ. ರೈಲ್ವೇ ನಿಲ್ದಾಣ ಒಳ ಹಾಗೂ ಹೊರಗೆ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಡಿಸೆಂಬರ್ 26ರಿಂದಲೂ ನೀಲಿ ಡ್ರಮ್ ಇರುವುದು ಗೊತ್ತಾಗಿದೆ. ಡಿಸೆಂಬರ್ 24 ಅಥವಾ 25 ರಂದು ಕೊಲೆ ಮಾಡಿ ಆರೋಪಿಗಳು ಡ್ರಮ್ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.