ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಇಂದು ಮತಯಾಚನೆ ಮಾಡಿದರು.
ನಿನ್ನೆ ನಾಮಪತ್ರ ಸಲ್ಲಿಸಿದ ನಂತರ ಕೆಲ ಭಾಗಗಳಲ್ಲಿ ಭೇಟಿ ಕೊಟ್ಟು ಪ್ರಚಾರ ನಡೆಸಿದ್ದ ಅವರು, ಇಂದು ಬೆಳಗ್ಗೆ ಕೂಡ ಮನೆ-ಮನೆಗೆ ತೆರಳಿ ಸಾರ್ವಜನಿಕರನ್ನು ಭೇಟಿ ಮಾಡಿ ಮತಯಾಚಿಸಿದರು. ಮತಯಾಚನೆ ಸಂದರ್ಭ ಹಿರಿಯ ನಾಗರಿಕರನ್ನು ಹೆಚ್ಚಾಗಿ ಪರಿಗಣಿಸಿದ್ದ ಅವರು, ಆತ್ಮೀಯವಾಗಿ ಮಾತುಕತೆ ನಡೆಸುವ ಮೂಲಕ ಮತಯಾಚನೆಯ ಜೊತೆಗೆ ಆರೋಗ್ಯ ಕೂಡ ವಿಚಾರಿಸಿದರು.
ಮತಯಾಚನೆಗೆ ತೆರಳಿದ ಸಂದರ್ಭ ಆಟವಾಡುತ್ತಿದ್ದ ಮಕ್ಕಳನ್ನು ಮಾತನಾಡಿಸಿ, ಕುಶಲ ವಿಚಾರಿಸಿದರು. ಉದ್ಯಾನಗಳಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯರು ಮತ್ತು ಯುವ ಸಮುದಾಯವನ್ನು ಕೂಡ ಭೇಟಿ ಮಾಡಿ ಮತಯಾಚಿಸಿದರು.
ನಾಮಪತ್ರಸಲ್ಲಿಕೆಗೆ ಮುನ್ನ ಕೂಡ ಸಾಕಷ್ಟು ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಅವರು ಇದನ್ನು ಮುಂದುವರಿಸಿಕೊಂಡು ಸಾಗಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ 50ಕ್ಕೂ ಹೆಚ್ಚು ಮಂದಿ ವೀಕ್ಷಕರನ್ನು ಈ ಕ್ಷೇತ್ರದಲ್ಲಿ ನಿಯೋಜಿಸಲಾಗಿದ್ದು, ಹಲವೆಡೆ ಅವರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಹಿರಿಯರು ಇನ್ನೂ ಪ್ರಚಾರ ಕಣಕ್ಕೆ ಇಳಿದಿಲ್ಲ. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಸದ್ಯ ಕುಸುಮ ಹನುಮಂತರಾಯಪ್ಪ ಕೆಲವಷ್ಟು ರಾಜ್ಯ ನಾಯಕರ ಜೊತೆ ತಮ್ಮ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ.
ಪ್ರಚಾರ ಸಭೆ:ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವ ರಾಮಲಿಂಗ ರೆಡ್ಡಿ ಪಾಲ್ಗೊಂಡು ಮಾತನಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಇದೇ ಸಭೆಯಲ್ಲಿ ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಎಚ್. ಎಂ. ರೇವಣ್ಣ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.