ಸಚಿವ ಚೆಲುವರಾಯಸ್ವಾಮಿ ಮಾತನಾಡಿದರು. ಬೆಂಗಳೂರು/ಮಂಡ್ಯ:''ಆತ್ಮಹತ್ಯೆ ಯತ್ನಿಸಿದ ಚಾಲಕನನ್ನು ತಾಲೂಕು ಲೆವೆಲ್ ಆಸ್ವತ್ರೆಯಿಂದ ಶಿಫ್ಟ್ ಮಾಡೋದು ಬೇಡ ಎಂದು ಜೆಡಿಎಸ್ ನವರು ತಡೆದರೋ ಇಲ್ಲೋ ಕೇಳಿ ಎಂದು ಸಚಿವ ಚೆಲುವರಾಯಸ್ವಾಮಿ, ಹೆಚ್ಡಿಕೆಗೆ ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ''ಕುಮಾರಸ್ವಾಮಿಗೆ ಅಧಿಕಾರ ಇಲ್ಲ. ಅದಕ್ಕಾಗಿ ಏನೇನೋ ಮಾತನಾಡ್ತಾ ಇದ್ದಾರೆ. ಚಾಲಕನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಆತನನ್ನು ಬೇರೆ ಯಾವುದೋ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿರಲಿಲ್ಲ. ನಾಗಮಂಗಲದಿಂದ ಮಂಡ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೇವಲ 30 ಕಿ.ಮೀ. ದೂರ ವರ್ಗಾವಣೆ ಮಾಡಿರೋದು. ಆತನ ಜೀವಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಕುಮಾರಸ್ವಾಮಿ ನೇರ ಹೊಣೆ'' ಎಂದು ಕಿಡಿ ಕಾರಿದರು.
''ಆತ ವಿಷ ಕುಡಿದಾಗ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ರು. ಹೆಚ್ಚಿನ ಚಿಕಿತ್ಸೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಸಂಬಂಧಿಕರು ಮುಂದಾಗಿದ್ರು. ಆದರೆ ಕುಮಾರಸ್ವಾಮಿ ಬೇಡ ಅಂತ ಹೇಳಿದ್ದಾರೆ. ಆಸ್ಪತ್ರೆಗೆ ಹೋಗುತ್ತಿದ್ದವರನ್ನ ಮಾಜಿ ಶಾಸಕ ಮತ್ತು ಅವನ ಪತ್ನಿ ತಡೆದಿದ್ದಾರೆ. ಬೆಳಗ್ಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಇದು ಅಪರಾಧ ಅಲ್ಲವೇ, ಆತನಿಗೆ ಚಿಕಿತ್ಸೆ ತಡವಾಗಿದೆ. ಅದಕ್ಕೆ ಕುಮಾರಸ್ವಾಮಿ ಕಾರಣ'' ಎಂದು ಆರೋಪಿಸಿದರು.
ವರ್ಗಾವಣೆ ದಂಧೆ ವಿಚಾರವಾಗಿ ಮಾತನಾಡಿದ ಅವರು, ''ಕುಮಾರಸ್ವಾಮಿಯವರು ಹೊಸದಾಗಿ ಪ್ರಸ್ತಾಪ ಮಾಡ್ತಿಲ್ಲ. ವರ್ಗಾವಣೆ ವಿಚಾರದಲ್ಲಿ ನಾನು ಯಾವುದೇ ಪತ್ರ ಕೊಟ್ಟಿಲ್ಲ. ಸದನದಲ್ಲಿ ಕುಮಾರಸ್ವಾಮಿಗೆ ನಮ್ಮ ಮಂತ್ರಿಗಳನ್ನು, ಮುಖ್ಯಮಂತ್ರಿಗಳನ್ನು ನೋಡಲು ಆಗ್ತಿಲ್ಲ. ದೇವರು ಕುಮಾರಸ್ವಾಮಿಯವರಿಗೆ ಸಮಾಧಾನ ನೀಡಲಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ವರ್ಗಾವಣೆ ಮಾಡುದ್ರು ಕೇಳಿ'' ಎಂದು ಟೀಕಿಸಿದರು.
''ಆತ್ಮಹತ್ಯೆ ಯತ್ನಿಸಿದ ಡ್ರೈವರ್ ಅವರ ಹೆಂಡತಿ ಪಂಚಾಯತ್ ಮೆಂಬರ್, ಅಧ್ಯಕ್ಷರಾಗಲು ಪ್ರಯತ್ನ ಮಾಡ್ತಾ ಇದ್ದಾರೆ. ಇದು ರಾಜಕೀಯ ಇರಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲಿ 12ಕ್ಕೆ 12 ಸ್ಥಾನವೂ ಜೆಡಿಎಸ್ ಸದಸ್ಯರಿದ್ದಾರೆ. ಅಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲ'' ಎಂದು ಇದೇ ವೇಳೆ ತಿಳಿಸಿದರು.
ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಶಾಸಕ :ಇದೇ ವೇಳೆ ಮಾತನಾಡಿದ ಶಾಸಕ ಬಾಲಕೃಷ್ಣ, ''ಕುಮಾರಸ್ವಾಮಿ ಯದ್ದು ಬರೀ ಬ್ಲ್ಯಾಕ್ ಮೇಲ್. ಅವರು ಬ್ಲಾಕ್ ಮೇಲ್ ಮಾಡೋದು ನಿಲ್ಲಿಸಲಿ. ಸುಮ್ಮನೆ ಅಷ್ಟು ಉದ್ದ, ಇಷ್ಟು ದಪ್ಪ ಅಂತಾರೆ ಅಷ್ಟೇ'' ಎಂದು ತಿರುಗೇಟು ನೀಡಿದರು.
ಇದಕ್ಕೂ ಮೊದಲು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ''ಕೆಲವರು ಅನಾವಶ್ಯಕವಾಗಿ ಈ ರೀತಿ ರಾಜಕೀಯ ಮಾಡೋದು ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದೆ. ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆಗಳು ನಡೆದಿವೆ. ನಾನು ಆ ಚಾಲಕನ ವರ್ಗಾವಣೆಗೆ ಪತ್ರ ನೀಡಿಲ್ಲ. ವರ್ಗಾವಣೆ ಮಾಡಿ ಅಂತ ಹೇಳಿಲ್ಲ.
ಆದರೆ, ವರ್ಗಾವಣೆಯಾಗಿದ್ದು, ಚಾಲಕನ ಬಾವ ನನಗೆ ಫೋನ್ ಮಾಡಿದ್ರು. ಹಾಗಾಗಿ ಅದನ್ನ ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ. ಬಳಿಕ ವರ್ಗಾವಣೆಯನ್ನು ಕ್ಯಾನ್ಸಲ್ ಮಾಡಿ ಅಂತ ತಿಳಿಸಿದ್ದೆ. ಇವರು ನಿನ್ನೆ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಹಿಂದೆಯೂ ಸಾಕಷ್ಟು ವರ್ಗಾವಣೆ ಆಗಿದೆ. ಹಾಗಾಂತ ಜೆಡಿಎಸ್ ನವರೆಲ್ಲರನ್ನೂ ವರ್ಗಾವಣೆ ಮಾಡುವುದಕ್ಕೆ ಆಗುತ್ತದೆಯಾ?'' ಎಂದರು.
ಮಂತ್ರಿ ಮಂಡಲದಿಂದ ಚಲುವರಾಯಸ್ವಾಮಿ ವಜಾ ಮಾಡುವಂತೆ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಕುಮಾರಸ್ವಾಮಿಗೆ ಕೈ ಮುಗಿದ ಸಚಿವ ಚಲುವರಾಯಸ್ವಾಮಿ, ''ಅವರು ಏನಾದ್ರೂ ಹೇಳಲಿ, ಅವರಿಗೆ ಒಳ್ಳೆದಾಗಲಿ. ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ'' ಎಂದು ಹೇಳಿದರು. ''ಕುಮಾರಸ್ವಾಮಿ ಅವರು ಏನೇ ಹೇಳಲಿ, ನಾನು ತಲೆಕೆಡಿಸಿಕೊಳ್ಳಲ್ಲ. ಜೆಡಿಎಸ್ನವರು ಇದರಲ್ಲಿ ರಾಜಕಾರಣ ಮಾಡ್ತಿದ್ದಾರೆ. ಅವರಿಗೆ ಆ ಚಾಲಕ ಗುಣಮುಖ ಆಗೋದು ಬೇಡ. ಅವರಿಗೆ ಸಮಸ್ಯೆ ಬೇಕು. ಹುಷಾರಾಗೋದು ಬೇಕಿಲ್ಲ. ಚಾಲಕನ ಹೆಚ್ಚವರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಬಿಟ್ಟಿಲ್ಲ. ಯಾರೆಲ್ಲ ಸರ್ಕಸ್ ಮಾಡಿದ್ದಾರೆ ಅಂತ ಗೊತ್ತು. ಕುಮಾರಸ್ವಾಮಿ ಅವರಿಗೆ ಇನ್ನೊಬ್ಬರ ಬಗ್ಗೆ ಟೀಕೆ ಮಾಡೋದೆ ಕೆಲಸ. ಆ ಚಾಲಕ ಗುಣಮುಖವಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ'' ಎಂದು ಹೇಳಿದರು.
ಇದನ್ನೂ ಓದಿ:7ನೇ ವೇತನ ಆಯೋಗದ ವರದಿ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ, ಖಾಲಿ ಹುದ್ಧೆಗಳ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ