ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಮೈಸೂರಿನ ಮಹಾರಾಜ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ 'ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ'ಯು ಆಗಸ್ಟ್ 7ರಿಂದ ಆಗಸ್ಟ್ 26ರವರೆಗೆ ನಡೆಯಲಿದೆ ಎಂದು ಕೆಎಸ್‌ಸಿಎ ತಿಳಿಸಿದೆ.
ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ, ಗೌರವ ಕಾರ್ಯದರ್ಶಿ ಸಂತೋಷ್ ಮೆನನ್ ಹಾಗೂ ಗೌರವ ಖಜಾಂಚಿ ವಿನಯ್ ಮೃತ್ಯುಂಜಯ ಟ್ರೋಫಿ ಹಾಗೂ ಲಾಂಛನವನ್ನು ಶನಿವಾರ ಬಿಡುಗಡೆ ಮಾಡಿದರು.
2005ರಲ್ಲಿ ಬ್ರಾಡ್ಮನ್ ಕಪ್ ಟೂರ್ನಿ ನಡೆಸುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಟಿ-20 ಕ್ರಿಕೆಟ್ ಆಯೋಜಿಸಿದ ಕೀರ್ತಿಗೆ ಪಾತ್ರವಾಗಿರುವುದನ್ನು ಸ್ಮರಿಸಿದ ರೋಜರ್ ಬಿನ್ನಿ, ಕ್ರಿಕೆಟ್‌ನ ಎಲ್ಲ ಹೊಸ ಮಾದರಿಗೆ ಕೆಎಸ್‌ಸಿಎ ಮುನ್ನುಡಿ ಬರೆದಿದೆ. 2009ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಆರಂಭಿಸಿ, ಯಶಸ್ವಿಯಾಗಿ ಎಂಟು ವರ್ಷಗಳ ಕಾಲ ನಡೆಸಿ ಹಲವಾರು ಪ್ರತಿಭಾವಂತ ಯುವ ಕ್ರಿಕೆಟಿಗರು ಮಿಂಚಿರುವುದನ್ನು ನೋಡಿದ್ದೇವೆ. ನಮ್ಮ ಕ್ರಿಕೆಟಿಗರಿಗೆ ನಿರಂತರ ಅವಕಾಶ ನೀಡುವುದು ಮತ್ತು ಅವರ ಕ್ರಿಕೆಟ್ ಬದುಕಿನಲ್ಲಿ ಉನ್ನತ ಹಂತಕ್ಕೆ ಸಜ್ಜಾಗಲು ವೇದಿಕೆ ನೀಡುವ ಉದ್ದೇಶದಿಂದ ನಾವು ಈ ಬಾರಿ 'ಮಹಾರಾಜ ಟ್ರೋಫಿ ಟಿ-20 ಟೂರ್ನಿ' ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಕೆಎಸ್‌ಸಿಎಯಿಂದ 'ಮಹಾರಾಜ ಟ್ರೋಫಿ' ಅನಾವರಣ: ಆ.7ರಿಂದ ಮೈಸೂರಿನಲ್ಲಿ ಟಿ-20 ಟೂರ್ನಿ ಆರಂಭ ಯಾವ ತಂಡಗಳು ಭಾಗಿ?:ಟೂರ್ನಿಯ ಲಾಂಛನ ಮತ್ತು ಟ್ರೋಫಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಲೋಹದಲ್ಲಿ ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾಗಿರುವ ಈ ಟ್ರೋಫಿಯಲ್ಲಿ 11 ರೆಕ್ಕೆಗಳಿದ್ದು, ಇದು ಕ್ರಿಕೆಟ್ ತಂಡದಲ್ಲಿರುವ ಒಟ್ಟು ಆಟಗಾರರನ್ನು ಪ್ರತಿನಿಧಿಸುತ್ತದೆ ಎಂದು ರೋಜರ್ ಬಿನ್ನಿ ತಿಳಿಸಿದರು.
ಈ ಟೂರ್ನಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಆಗಸ್ಟ್ 7ರಂದು ಮೈಸೂರಿನಲ್ಲಿ ಟೂರ್ನಿ ಆರಂಭವಾಗಲಿದ್ದು, ಅಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿವೆ. ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನನ್ ಮಾಹಿತಿ ನೀಡಿದರು.
35 ವರ್ಷ ವಯೋಮಿತಿಯ ಎಲ್ಲ ಉತ್ತಮ ಶ್ರೇಷ್ಠ ದರ್ಜೆಯ ಕ್ರಿಕೆಟಿಗರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಆಟಗಾರರನ್ನು ಡ್ರಾಫ್ಟ್ ಮೂಲಕ ಆಯ್ಕೆ ಮಾಡಲಾಗುವುದು. ನಾಯಕರು ಮತ್ತು ಉಪನಾಯಕರನ್ನು ಕೆಎಸ್‌ಸಿಎ ಶಿಫಾರಸು ಮಾಡಲಿದೆ. ಪ್ರತಿಯೊಂದು ತಂಡಕ್ಕೂ ಸಹಾಯಕ ಸಿಬ್ಬಂದಿಯನ್ನು ನಾವು ನಿಯೋಜಿಸಲಿದ್ದೇವೆ ಎಂದು ತಿಳಿಸಿದರು.
ಯಾವುದರಲ್ಲಿ ಟೂರ್ನಿ ಪ್ರಸಾರ?: ಎರಡು ವಾರಗಳ ಕಾಲ ನಡೆಯುವ ಕ್ರಿಕೆಟ್ ಸಂಭ್ರಮದಲ್ಲಿ ರಾಜ್ಯದ ಉದಯೋನ್ಮುಖ ಆಟಗಾರರಿಗೆ ಉತ್ತಮ ವೇದಿಕೆ ಸಿಗಲಿದೆ. ಮನೆಯಂಗಣದ ಪ್ರೇಕ್ಷಕರ ಸಮ್ಮುಖದಲ್ಲಿ ಮಿಂಚುವ ಅವಕಾಶ ಇದಾಗಿದ್ದು, ಪ್ರತಿಯೊಂದು ಪಂದ್ಯವು ಸ್ಟಾರ್ ಸ್ಪೋರ್ಟ್ಸ್-2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರವಾಗೊಳ್ಳಲಿದೆ. ಫ್ಯಾನ್‌ಕೋಡ್ ಆ್ಯಪ್‌ನಲ್ಲಿಯೂ ನೇರಪ್ರಸಾರವಾಗಲಿದೆ ಎಂದು ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ವಿವರಿಸಿದರು.
ಕರ್ನಾಟಕ ಶ್ರೇಷ್ಠ ಕ್ರಿಕೆಟಿಗರಾದ ದೇವದತ್ತ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಮನೀಶ್ ಪಾಂಡೆ, ಜೆ.ಸುಚಿತ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಅಭಿನವ ಮನೋಹರ್, ಕೆ.ಸಿ.ಕಾರಿಯಪ್ಪ, ಪ್ರವೀಣ್ ದುಬೆ ಮತ್ತು ಅಭಿಮನ್ಯು ಮಿಥುನ್ ಮಹಾರಾಜ ಟ್ರೋಫಿಯಲ್ಲಿ ಆಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ:ವಿರಾಟ್ ಶ್ರೇಷ್ಠ ಆಟಗಾರ, ಫಾರ್ಮ್ಗೆ ಮರಳಲಿ: ಕಪಿಲ್ ದೇವ್ ಬಯಕೆ