ಬೆಂಗಳೂರು:ರಾಜ್ಯದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧ ಮಾಡುತ್ತಿರುವ ಬೆನ್ನಲ್ಲೇ ಹಾಗೂ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಘೋಷಣೆ ಮಾಡದಂತೆ ಅವರು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ಧಾರೆ. ಈ ಬಗ್ಗೆ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಈಶ್ವರಪ್ಪ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರು ಪಕ್ಷದ ನಾಯಕರಿಗೆ ಧನ್ಯವಾದವನ್ನೂ ಸಲ್ಲಿಕೆ ಮಾಡಿದ್ದಾರೆ. ಕಳೆದ 40 ವರ್ಷಗಳಿಂದ ಬೂತ್ ಮಟ್ಟದಿಂದ ಉಪಮುಖ್ಯಮಂತ್ರಿ ಆಗುವವರೆಗೂ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಮೊದಲು ಅವರು ತಮ್ಮ ಪುತ್ರ ಕಾಂತೇಶ್ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು ಎಂಬ ಸುದ್ದಿಯೂ ಇದೆ. ಈಶ್ವರಪ್ಪ ಈ ಪತ್ರ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಈಶ್ವರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ನಡುವೆ ವಾಕ್ಸಮರ ಕೂಡಾ ನಡೆದಿತ್ತು. ಈ ಮಧ್ಯೆ ಅವರು ದಿಢೀರ್ ಎಂದು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಅವರಿಗೀಗ 74 ವರ್ಷ ವಯಸ್ಸಾಗಿದೆ. 75 ವರ್ಷ ಆದವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ನಿಯಮ ಪಕ್ಷದಲ್ಲಿ ಅಲಿಖಿತವಾಗಿದೆ. ಇದು ಸಹ ಅವರ ನಿವೃತ್ತಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.