ಬೆಂಗಳೂರು:ಬಿಜೆಪಿಯವರಿಗೆ ರೈತಪರ ಕಾಳಜಿ ಇದ್ದರೆ ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವ ಬಗ್ಗೆ ಮಾತಾಡಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 45 ಸಾವಿರ ಕೋಟಿ ಪರಿಹಾರ ಬಾಕಿ ಇದೆ. ಅದನ್ನು ಕೊಡಿಸಿ. ನರೇಗಾ ಯೋಜನೆಯಡಿ 8500 ಕೋಟಿ ಬಾಕಿ ಇದ್ದು, ಅದನ್ನು ಕೊಡಿಸಿ. 15ನೇ ಹಣಕಾಸು ಆಯೋಗದಲ್ಲಿ 5 ಸಾವಿರ ಕೋಟಿ ಬಾಕಿ ಇದೆ, ಅದನ್ನು ಕೊಡಿಸಿ. ಬರಗಾಲ ಪರಿಹಾರ ಕೊಡಿಸಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು ಧ್ವನಿ ಎತ್ತುತ್ತಿಲ್ಲ. ಪ್ರಹ್ಲಾದ್ ಜೋಶಿ ತಮ್ಮ ಭಾಗದ ಸಮಸ್ಯೆ ಬಗ್ಗೆ ಮೋದಿ ಜತೆ ಮಾತನಾಡಿದ್ದಾರೆ. ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಸಂಸದೆಯಾಗಿ ಎಷ್ಟು ಬಾರಿ ಆ ಜಿಲ್ಲೆಗೆ ಭೇಟಿ ನೀಡಿದ್ದೀರಿ, ಎಷ್ಟು ಅನುದಾನ ತಂದಿದ್ದೀರಿ ಎಂದು ಪ್ರಶ್ನಿಸಿದರು.
ಚುನಾವಣೆ ಸಮೀಪಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳಿಂದ ಜನರ ದಿಕ್ಕು ತಪ್ಪಿಸಲು ಸಣ್ಣ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ. ರೈತರ ಬಗ್ಗೆ ನಿಮಗೆ ಅಷ್ಟೊಂದು ಆಸಕ್ತಿ ಇದ್ದರೆ ಬರಗಾಲದಲ್ಲಿ ಇದುವರೆಗೂ 5 ಪೈಸೆ ಹಣ ಬಿಡುಗಡೆ ಮಾಡಿಲ್ಲ. ನೀವು ರೈತ ವಿರೋಧಿ, ಜನವಿರೋಧಿ, ಪರಿಶಿಷ್ಟರ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಒಬಿಸಿ ವಿರೋಧಿಗಳು. ನೀವು ಏನಿದ್ದರೂ ಕಾರ್ಪೊರೇಟ್ ಸ್ನೇಹಿತರು. 9 ವರ್ಷಗಳಲ್ಲಿ ಸುಮಾರು 22 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಎಲ್ಲಾದರೂ ರೈತರ 1 ರೂ. ಸಾಲ ಮನ್ನಾ ಮಾಡಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಕಳೆದ ಒಂಬತ್ತೂವರೆ ವರ್ಷಗಳಿಂದ ಮಾಡಿರುವ ಯೋಜನೆ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಸಾಧನೆ ಏನು ಎಂದು ಹೇಳಿ ಚುನಾವಣೆ ಮಾಡಿ. ಅದನ್ನು ಬಿಟ್ಟು ಭಾವನಾತ್ಮಕ ವಿಚಾರ ಮುನ್ನಲೆಗೆ ತಂದು ಚುನಾವಣೆ ಮಾಡಬೇಕೇ? ರಾಜ್ಯದ ಜನ ನಿಮ್ಮ ಯೋಗ್ಯತೆ ಅರಿತಿದ್ದು, ನಿಮ್ಮ ಷಡ್ಯಂತ್ರಕ್ಕೆ ಬೀಳುವುದಿಲ್ಲ. ಬಿಜೆಪಿ ಮಾತೆತ್ತಿದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಮೇಲೆ ಮುಗಿಬೀಳುತ್ತಾರೆ. ಬಿಜೆಪಿ ಸಾಮಾನ್ಯ ಪರಿಜ್ಞಾನ ಇಲ್ಲದೆ ಮಾತನಾಡುವ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಅದನ್ನು ಬೆಂಬಲಿಸಿ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷ. ಸಿಎಂ ಐಷಾರಾಮಿ ವಿಮಾನ ಪ್ರಯಾಣ ಮಾಡಿದರಂತೆ. ಮೋದಿ ಅವರು ಒಡಾಡುವುದಕ್ಕೆ ಎಂಟೂವರೆ ಸಾವಿರ ಕೋಟಿ ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಆ ವಿಮಾನದ ಐಶಾರಾಮಿ ಹೇಗಿದೆ ಎಂದು ಬಿಜೆಪಿಯವರು ತೋರಿಸಲಿ ಎಂದು ಸವಾಲೆಸೆದರು.