ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಗೆ ನಡೆಯುವ ಚುನಾವಣೆ ಕೇವಲ ಔಪಚಾರಿಕವಾಗಿದ್ದು ಡಿ.ಕೆ. ಶಿವಕುಮಾರ್ ಮುಂದುವರಿಕೆ ನಿಶ್ಚಿತವಾಗಿದೆ.
ಎರಡು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಸಂದರ್ಭ, ತಾವು ಅಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಕೊನೆಯ ದಿನದಂದು ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ. ಈ ಒಂದು ಹೇಳಿಕೆಯ ಜೊತೆಗೆ ಅವರು ಅಕ್ಟೋಬರ್ 16 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದಿದ್ದಾರೆ. ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ಸಾಕಷ್ಟು ಬಣಗಳಿದ್ದು ಕೆಪಿಸಿಸಿ ಅಧ್ಯಕ್ಷರ ವಿರೋಧಿ ಬಣ ಇದನ್ನೇ ಬಂಡವಾಳವಾಗಿಸಿಕೊಂಡು ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕವಾಗಲಿದೆ ಎಂಬ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ.
ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಲಯ ಅಧ್ಯಕ್ಷರ ಅವಧಿ ಮೂರು ವರ್ಷ: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಕಾಲಾವಧಿ ಮೂರು ವರ್ಷಕ್ಕೆ ನಿಗದಿಯಾಗಿದೆ. 2020ರ ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಹೆಸರು ಘೋಷಣೆಯಾಗಿತ್ತು. ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ತಿಂಗಳು ಮುಂದಕ್ಕೆ ಹೋಗಿದ್ದ ಪದಗ್ರಹಣ ಸಮಾರಂಭ 2020ರ ಜುಲೈ 2 ರಂದು ನಡೆದಿತ್ತು. ಮಾರ್ಚ್ ತಿಂಗಳನ್ನೇ ಲೆಕ್ಕಕ್ಕೆ ಹಿಡಿದರೂ ಕೇವಲ ಎರಡೂವರೆ ವರ್ಷದ ಕಾಲಾವಧಿಯನ್ನು ಡಿಕೆಶಿ ಪೂರೈಸಿದ್ದಾರೆ. ಒಬ್ಬರು ಅಧ್ಯಕ್ಷರ ಪದಗ್ರಹಣದ ಜೊತೆಗೆ ಮೂವರು ಕಾರ್ಯಾಧ್ಯಕ್ಷರು ಸಹ ಅಧಿಕಾರ ವಹಿಸಿಕೊಂಡಿದ್ದರು. ಆ ಬಳಿಕ ಇನ್ನಿಬ್ಬರು ಕಾರ್ಯಾಧ್ಯಕ್ಷರನ್ನು ಸೇರ್ಪಡೆ ಮಾಡಲಾಗಿತ್ತು.
ರಾಜೀನಾಮೆ ನೀಡಿದ್ದರು ದಿನೇಶ್ ಗುಂಡೂರಾವ್:ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಒಂದು ವರ್ಷಕ್ಕೂ ಮುನ್ನವೇ ದಿನೇಶ್ ಗುಂಡೂರಾವ್ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. 2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕಡಿಮೆ ಸ್ಥಾನಗಳು ಬಂದ ಹಿನ್ನೆಲೆ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಮುನ್ನವೇ ಅವರು ಕೆಪಿಸಿಸಿಯ ಬಹುತೇಕ ಎಲ್ಲಾ ವಿಭಾಗಗಳನ್ನು ವಿಸರ್ಜಿಸಿದ್ದರು. ಹೀಗಾಗಿ ಹೊಸ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಬೇಕಿತ್ತು. ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿ ನಿಯೋಜಿತರಾದ ಒಂದೂವರೆ ವರ್ಷದವರೆಗೂ ಪದಾಧಿಕಾರಿಗಳ ನೇಮಕಕ್ಕೆ ಕಾಲ ಕೂಡಿಬಂದಿರಲಿಲ್ಲ. ಇತ್ತೀಚೆಗಷ್ಟೇ ಪದಾಧಿಕಾರಿಗಳ ನೇಮಕವಾಗಿದ್ದು ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ.
ಚುನಾವಣೆಯಲ್ಲ, ಆಯ್ಕೆ ಪ್ರಕ್ರಿಯೆ ಮಾತ್ರ: ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ ಹೊಸ ಪದಾಧಿಕಾರಿಗಳ ನೇಮಕ ಆದ ತಕ್ಷಣ ಔಪಚಾರಿಕವಾಗಿ ಅಧ್ಯಕ್ಷರ ಚುನಾವಣೆ ನಡೆಯಬೇಕಾಗುತ್ತದೆ. ಇದೇ ವಿಚಾರವನ್ನು ಡಿ.ಕೆ. ಶಿವಕುಮಾರ್ ರಾಯಚೂರಿನಲ್ಲಿ ಪ್ರಸ್ತಾಪಿಸಿದ್ದು, ಈ ವಿಚಾರ ಬೇರೆಯದೇ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ನಡೆಯುವುದು ಕೇವಲ ಪ್ರಕ್ರಿಯೆ ಮಾತ್ರ. ಇಲ್ಲಿ ಯಾವುದೇ ರೀತಿಯ ಚುನಾವಣೆಯಾಗಲಿ ಅಥವಾ ಚುನಾವಣೆಯನ್ನು ಹೋಲುವ ರೀತಿಯ ಬೆಳವಣಿಗೆಗಳಾಗಲಿ ನಡೆಯುವುದಿಲ್ಲ. ಆರೆಂಟು ತಿಂಗಳಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರು ನೋಡುತ್ತಿರುವ ಕಾಂಗ್ರೆಸ್ ಈ ಸಂದರ್ಭದಲ್ಲಿ ಯಾವುದೇ ರೀತಿಯ ಹೊಸ ಬದಲಾವಣೆಗೆ ಯೋಚನೆ ಮಾಡುತ್ತಿಲ್ಲ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಎಲ್ಲಾ ರಾಜ್ಯಗಳ ಅಧ್ಯಕ್ಷರ ಆಯ್ಕೆಗೂ ಚುನಾವಣೆ ನಡೆಯಬೇಕಿದೆ. ಮೂರು ವರ್ಷ ಅವಧಿ ಪೂರ್ಣಗೊಳಿಸದ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಮುಂದುವರಿಸುವ ಕಾರ್ಯ ಆಗಲಿದೆ. ಈ ಹಿನ್ನೆಲೆ ಇನ್ನೊಂದು ವರ್ಷ ಅಧಿಕಾರ ಅವಧಿ ಹೊಂದಿರುವ ಡಿ.ಕೆ. ಶಿವಕುಮಾರ್ ತಮ್ಮ ಅವಧಿ ಪೂರ್ಣಗೊಳ್ಳುವವರೆಗೂ ನಿರಾತಂಕವಾಗಿ ಮುಂದುವರಿಯಲಿದ್ದಾರೆ.
ಚುನಾವಣಾ ಪರ್ವ - ಬದಲಾವಣೆ ಸದ್ಯಕ್ಕಿಲ್ಲ: ಈಗಾಗಲೇ ಅಧ್ಯಕ್ಷ ಅವಧಿ ಮುಕ್ತಾಯಗೊಂಡಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಸೇರಿದಂತೆ ಹಲವರ ಸ್ಥಾನ ಬದಲಾಗಬೇಕಿದೆ. ಆದರೆ ಯಾವುದೇ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ಎದುರಾಗಬಹುದು. ಇದರ ಬೆನ್ನಲ್ಲೇ ವಿಧಾನಸಭೆ ಚುನಾವಣೆಯ ಸಿದ್ಧತೆ ಸಹ ನಡೆಯುತ್ತಿದ್ದು, ಮುಂಬರುವ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸಹ ನಡೆಯಲಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆಗೆ ಯಾವುದೇ ಕಿರಿಕಿರಿ ಎದುರಾಗದಿರಲಿ ಎಂಬ ಉದ್ದೇಶದಿಂದ ಯಾವುದೇ ಆಯಕಟ್ಟಿನ ಸ್ಥಾನವನ್ನು ಬದಲಿಸದಿರಲು ಕಾಂಗ್ರೆಸ್ ತೀರ್ಮಾನಿಸಿದೆ.
ಹೊಸ ಬೆಳವಣಿಗೆಗೆ ಆಸ್ಪದ ನೀಡಲಾರದು ಪಕ್ಷ:ಒಂದೆಡೆ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿದ್ದಾರೆ. ಇದರ ಅಂಗವಾಗಿ ಇದೇ ತಿಂಗಳ ಕೊನೆಯಿಂದ 21 ದಿನಗಳ ಕಾಲ ಮಧ್ಯ ಕರ್ನಾಟಕದಲ್ಲಿ ರಾಹುಲ್ ಪಾದಯಾತ್ರೆ ನಡೆಯಲಿದೆ. ಈ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ಅಹಿತಕರ ಬೆಳವಣಿಗೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಹ ನಾಯಕರ ಮೇಲಿದೆ. ಹೀಗಿರುವ ಸಂದರ್ಭದಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ಯಾವುದೇ ಪ್ರಯತ್ನ ನಡೆಯಲು ಸಾಧ್ಯವಿಲ್ಲ. ಇದೊಂದು ಔಪಚಾರಿಕ ಪ್ರಕ್ರಿಯೆಯಾಗಿದ್ದು, ನಿಯಮಾನುಸಾರ ನಡೆಯಲಿದೆ.
ಅಧ್ಯಕ್ಷರ ಬದಲಾವಣೆ ಇಲ್ಲ: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಳೆದ ಎರಡೂವರೆ ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಸಮರ್ಥ ಕಾರ್ಯನಿರ್ವಹಣೆ ಮಾಡಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆಯಬೇಕಿದೆ. ಹೀಗಾಗಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಶಿವಕುಮಾರ್ ಬದಲು ಬೇರೆಯವರು ಅಧ್ಯಕ್ಷರಾಗುವ ಯಾವ ಸಾಧ್ಯತೆಯೂ ಗೋಚರಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ಇದರ ಪ್ರಕ್ರಿಯೆಯ ಭಾಗವಾಗಿಯೇ ಎಲ್ಲಾ ರಾಜ್ಯಗಳಲ್ಲಿಯೂ ಚುನಾವಣೆ ನಡೆಯಲಿದೆ. ಬದಲಾವಣೆ ವಿಚಾರವಾಗಿ ಯಾವುದೇ ಗೊಂದಲ ಬೇಡ. ಮುಂದಿನ ಚುನಾವಣೆವರೆಗೂ ಪಕ್ಷದಲ್ಲಿ ಬದಲಾವಣೆ ಆಗುವುದಿಲ್ಲ. ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಕಾರ್ಯ ಮಾಡುತ್ತಿದ್ದಾರೆ. ಅಧ್ಯಕ್ಷರು ಬದಲಾವಣೆಯಾಗುತ್ತಾರೆ ಎಂಬ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಗೊಂದಲ ಬೇಡ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.