ಬೆಂಗಳೂರು : ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ವರ್ಗವನ್ನು ಪ್ರತಿನಿಧಿಸುವ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶ ಸ್ಪಷ್ಟ ಮುನ್ಸೂಚನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ಫಲಿತಾಂಶ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ನಡೆದ ಎರಡೂ ಕ್ಷೇತ್ರಗಳ ಪೈಕಿ ಒಂದರಲ್ಲಿ ಬಿಜೆಪಿ, ಮತ್ತೊಂದರಲ್ಲಿ ಜೆಡಿಎಸ್ ಗೆದ್ದಿತ್ತು. ಆದರೆ, ಈ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಬಿಜೆಪಿ ಗೆದ್ದಿದ್ದ ಹಾನಗಲ್ ಕ್ಷೇತ್ರವನ್ನು ನಾವು ಗೆದ್ದುಕೊಂಡಿದ್ದೇವೆ.
ಕಳೆದ ಬಾರಿ ಸಿಂದಗಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಕಾಂಗ್ರೆಸ್, ಈ ಬಾರಿ ಮತ ಪ್ರಮಾಣ ದುಪ್ಪಟ್ಟು ಮಾಡಿಕೊಂಡು ಎರಡನೇ ಸ್ಥಾನಕ್ಕೆ ಏರಿದೆ. ಹೀಗಾಗಿ, ಎರಡೂ ಕ್ಷೇತ್ರಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಇದು ಜನ ಬದಲಾವಣೆ ಬಯಸಿರುವುದರ ಮುನ್ಸೂಚನೆ ಎಂದರು.
ನಾನು ಈ ಹಿಂದೆ ಹೇಳಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಬಿಜೆಪಿ ಹಾಗೂ ಬಿಜೆಪಿ ಸರ್ಕಾರ ಕೊಚ್ಚಿ ಹೋಗಲಿದೆ ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಮತದಾರ ಬೇಸತ್ತಿದ್ದು, ಅದನ್ನು ಬದಲಿಸಲು ನಿರ್ಧರಿಸಿದ್ದಾನೆ. ಅದಕ್ಕೆ ಈ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದರು.
ವಿಶ್ಲೇಷಣೆ ಅನಗತ್ಯ :ಈ ಚುನಾವಣೆಯ ಫಲಿತಾಂಶದ ಬಗ್ಗೆ ನಾನು ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಶ್ರೀನಿವಾಸ ಮಾನೆ ಅವರು ಕಳೆದ ಬಾರಿ 6 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಬಿಜೆಪಿ ಅಧಿಕಾರದಲ್ಲಿದ್ದು, ಡಬಲ್ ಇಂಜಿನ್ ಸರ್ಕಾರ ಇದೆ. ಜತೆಗೆ ಮುಖ್ಯಮಂತ್ರಿಗಳ ಕ್ಷೇತ್ರ ಬೇರೆ, ಅವರು ಕ್ಷೇತ್ರದ ಅಳಿಯ. ಎಲ್ಲ ರೀತಿಯಲ್ಲೂ ಅವರಿಗೆ ಅನುಕೂಲ ಇತ್ತು. ಅವರ ಸರ್ಕಾರದಲ್ಲಿರುವ ನಮ್ಮ ಸ್ನೇಹಿತರು ಬ್ಯಾಗ್ ತುಂಬಿಕೊಂಡು ಹೋಗಿ ಬಹಳ ಪ್ರಯತ್ನಪಟ್ಟಿದ್ದರು.
ಸಿಂದಗಿಯಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೆವು. ಮನಗೂಳಿ ಅವರು ತಮ್ಮ ಪುತ್ರನನ್ನು ನಮ್ಮ ಪಕ್ಷದಲ್ಲಿ ಬಿಟ್ಟು ಹೋದರು. ಅವರು ಜೆಡಿಎಸ್ ಚಿಹ್ನೆಯಲ್ಲಿ ಗೆಲ್ಲುತ್ತೇವೆ ಎಂದಿದ್ದರೆ ನಮ್ಮ ತಕರಾರು ಏನೂ ಇರಲಿಲ್ಲ. ಅವರು ಕಾಂಗ್ರೆಸ್ಗೆ ಬರಲು ಮುಂದಾದಾಗ ಜಿಲ್ಲೆಯ ಎಲ್ಲ ನಾಯಕರು ಒಟ್ಟಾಗಿ ಅವರಿಗೆ ಟಿಕೆಟ್ ನೀಡಿದೆವು. ಅಲ್ಲೂ ನಾವು ಗೆಲ್ಲುವ ವಿಶ್ವಾಸ ಇತ್ತು. ಮತ ಪ್ರಮಾಣ ನೋಡಿದರೆ ನಾವು ಸೋತಿದ್ದರೂ ಸಮಾಧಾನ ತಂದಿದೆ ಎಂದರು.
ನಾವು ಒಂದೇ ದಿನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಹಂತ-ಹಂತವಾಗಿ ತರಬೇಕು. ಒಟ್ಟಾರೆಯಾಗಿ ಎರಡೂ ಕ್ಷೇತ್ರದ ಚುನಾವಣೆ ನೋಡಿದರೆ ಜನ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಮತದಾರರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇವಲ ಕೊರೊನಾ ವಿಚಾರ ಮಾತ್ರವಲ್ಲ, ಅವರಿಗೆ ಸಿಕ್ಕ ವ್ಯವಸ್ಥೆಯಲ್ಲಿ ಈ ಪರಿಸ್ಥಿತಿ ಬಂದಿದೆ.