ಬೆಂಗಳೂರು: ಖಾಲಿ ಇದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ಸೇರಿದಂತೆ ಉಭಯ ಸದನಗಳಲ್ಲಿ ಪ್ರತಿಪಕ್ಷದ ಪಾಲಿನ ಪ್ರಮುಖ ಸ್ಥಾನಗಳಿಗೆ ಬಿಜೆಪಿ ಹೈಕಮಾಂಡ್ ಹೆಸರು ಪ್ರಕಟಿಸಿದ್ದು, ಬಿಜೆಪಿ ಸರ್ಕಾರದಲ್ಲಿ ಸಭಾನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮತ್ತೊಮ್ಮೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿದೆ. ರೆಬೆಲ್ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಅರವಿಂದ್ ಬೆಲ್ಲದ್ಗೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಸ್ಥಾನ ನೀಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಪಕ್ಷದ ಜವಾಬ್ದಾರಿ ನಿರ್ವಹಿಸುವವರ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಿಸಿದ್ದಾರೆ. ಅದರಂತೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ, ಉಪನಾಯಕ ಸುನೀಲ್ ವಲ್ಯಾಪುರೆ, ಮುಖ್ಯ ಸಚೇತಕ ಎನ್.ರವಿಕುಮಾರ್ ಅವರನ್ನು ಆಯ್ಕೆ ಮಾಡಿದ್ದು, ವಿಧಾನಸಭೆ ಪ್ರತಿಪಕ್ಷ ಉಪನಾಯಕರನ್ನಾಗಿ ಶಾಸಕ ಅರವಿಂದ ಬೆಲ್ಲದ್, ಮುಖ್ಯ ಸಚೇತಕರನ್ನಾಗಿ ದೊಡ್ಡನಗೌಡ ಜಿ.ಪಾಟೀಲ್ ಅವರನ್ನು ನೇಮಿಸಲಾಗಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿದ ವೇಳೆ ಪರಿಷತ್ ಪ್ರತಿಪಕ್ಷದ ನಾಯಕರ ಆಯ್ಕೆ ಮಾಡಿರಲಿಲ್ಲ. ಈಗ ಆ ಸ್ಥಾನಕ್ಕೆ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಬಿಜೆಪಿ ಸರ್ಕಾರ ಬಂದ ನಂತರ ವಿಧಾನ ಪರಿಷತ್ ಸಭಾ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.
ಇದೀಗ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು ಪ್ರತಿಪಕ್ಷ ಸಾಲಿಗೆ ಬಂದಿದೆ. ಆಕಾಂಕ್ಷಿಗಳು ಸಾಕಷ್ಟು ಜನರಿದ್ದರು. ಶಶಿಲ್ ನಮೋಶಿ ಬಹಿರಂಗವಾಗಿಯೇ ಪ್ರತಿಪಕ್ಷ ನಾಯಕ ಸ್ಥಾನವನ್ನು ಕೇಳಿದ್ದರು. ಇದರ ಜೊತೆ ಸಾಕಷ್ಟು ಹಿರಿಯ ಸದಸ್ಯರು ಲಾಬಿ ನಡೆಸಿದ್ದರು. ಅಂತಿಮವಾಗಿ ಮತ್ತೊಮ್ಮೆ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನದ ಜವಾಬ್ದಾರಿ ನೀಡಲಾಗಿದೆ. ಪ್ರತಿಪಕ್ಷ ನಾಯಕರಿಲ್ಲದೇ ಇದ್ದರೂ ಸದನದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಪ್ರತಿನಿಧಿಸಿದ್ದು ಮತ್ತು ಆಡಳಿತ ಪಕ್ಷವನ್ನು ಎದುರಿಸಲು ಸಾಮರ್ಥ್ಯ ಇರುವುದನ್ನು ಮನಗಂಡು ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಎನ್.ರವಿಕುಮಾರ್ ಸದನದಲ್ಲಿ ಸಕ್ರೀಯರಾಗಿ ಮತ್ತು ಗಟ್ಟಿದನಿಯಾಗಿ ಸರ್ಕಾರದ ವಿರುದ್ಧ ನಿಲ್ಲುವ ವ್ಯಕ್ತಿಯಾಗಿದ್ದಾರೆ. ಅಲ್ಲದೇ, ಯಡಿಯೂರಪ್ಪ ಬಣದ ಜೊತೆ ಗುರುತಿಸಿಕೊಂಡಿದ್ದಾರೆ. ಸಂಘದ ಹಿನ್ನಲೆಯೂ ಇದೆ. ಹೀಗಾಗಿ ಅವರಿಗೆ ಪರಿಷತ್ನಲ್ಲಿ ಜವಾಬ್ದಾರಿ ನೀಡುವ ನಿರ್ಧಾರಕ್ಕೆ ಬಂದಿದ್ದು, ಪ್ರತಿಪಕ್ಷ ಮುಖ್ಯ ಸಚೇತಕ ಸ್ಥಾನ ನೀಡಲಾಗಿದೆ.
ಅದೇ ರೀತಿ ವಿಧಾನಸಭೆ ಉಪನಾಯಕ ಸ್ಥಾನವನ್ನು ಶಾಸಕ ಅರವಿಂದ ಬೆಲ್ಲದ್ಗೆ ನೀಡಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಲ್ಲಿ ರೆಬೆಲ್ ನಾಯಕರಾಗಿದ್ದಾರೆ. ಸದಾ ಯತ್ನಾಳ್ ಜೊತೆಗೆ ಗುರುತಿಸಿಕೊಳ್ಳುವ ಬೆಲ್ಲದ್ಗೆ ಈಗ ವಿಧಾನಸಭೆ ಉಪನಾಯಕ ಸ್ಥಾನ ನೀಡಲಾಗಿದೆ. ಎಲ್ಲಾ ಹುದ್ದೆ ದಕ್ಷಿಣ ಕರ್ನಾಟಕಕ್ಕೆ ಮಾತ್ರ ನೀಡಲಾಗುತ್ತದೆ. ಉತ್ತರ ಕರ್ನಾಟಕ ಕಡೆಗಣಿಸಲಾಗಿದೆ. ಯಡಿಯೂರಪ್ಪಗೆ ಬಣ್ಣ ನಮಗೆಲ್ಲ ಮಜ್ಜಿಗೆ ಎಂದು ಯತ್ನಾಳ್ ಟೀಕಿಸಿದ್ದರು. ಅದಕ್ಕೆ ತಿರುಗೇಟು ಎನ್ನುವಂತೆ ಬೆಲ್ಲದ್ಗೆ ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಜಾತಿ ಗಣತಿ ಬಗ್ಗೆ ಬಿಎಸ್ವೈ ತಮ್ಮ ನಿಲುವು ಸ್ಪಷ್ಟಪಡಿಸಬೇಕು: ಆಯನೂರು ಮಂಜುನಾಥ್ ಆಗ್ರಹ