ಬೆಂಗಳೂರು :ಸಾರಿಗೆ ನೌಕರರ ಒಕ್ಕೂಟದಲ್ಲಿ ಬಿರುಕು ಹೆಚ್ಚಾಗ್ತಿದ್ಯಾ? ಇಂತಹದೊಂದು ಅನುಮಾನ ಕಾಡದೇ ಇರದು. ಯಾಕೆಂದರೆ, ಕೂಟದ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರಕ್ಕೆ ಬೇಸತ್ತು ಪದಾಧಿಕಾರಿಗಳು ಒಬ್ಬೊಬ್ಬರಾಗಿ ಹೊರಗೆ ಬರುತ್ತಿದ್ದಾರೆ. ಕೂಟದ ಅಧ್ಯಕ್ಷ ಚಂದ್ರಶೇಖರ್ ಏಕ ಪಕ್ಷೀಯ ನಿರ್ಧಾರಗಳಿಗೆ ನೌಕರರು, ಪದಾಧಿಕಾರಿಗಳು ಗರಂ ಆಗಿ ಸುದ್ದಿಗೋಷ್ಠಿಯನ್ನೂ ನಡೆಸಿದರು.
ಲಕ್ಷಾಂತರ ನೌಕರರನ್ನ ಹೊಂದಿರುವ 4 ಸಾರಿಗೆ ನಿಗಮಗಳು ಒಗ್ಗಟಾಗಿ ಸೇರಿ ಬರೋಬ್ಬರಿ 15 ದಿನಗಳ ಕಾಲ ಮುಷ್ಕರವನ್ನೂ ನಡೆಸಿದರು. ಇದೀಗ ಅದೇ ಒಗ್ಗಟಿನಲ್ಲಿ ಅಪಸ್ವರ ಕೇಳಿ ಬಂದಿದೆ. ಮುಷ್ಕರ ವಿಫಲವಾಗಿದ್ದೆ ಸಾರಿಗೆ ಮುಖಂಡರಿಂದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇಂತಹದೊಂದು ಆರೋಪ ಮಾಡಿರುವುದು ಅವರದ್ದೇ ಕೂಟದಲ್ಲಿದ್ದ ಸದಸ್ಯರುಗಳು. ಸದ್ಯ ಕೂಟದಿಂದ ಆಚೆ ಬಂದವರು ಮತ್ತೊಂದು ಒಕ್ಕೂಟ ರಚನೆ ಮಾಡಿದ್ದಾರೆ. ಮುಷ್ಕರ ಸಮಯದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವ್ರ ತೀರ್ಮಾನವೇ ಕೊನೆಯ ತೀರ್ಮಾನ ಎಂದವರು, ಇದೀಗ ಅವರ ವಿರುದ್ಧವೇ ತಿರುಗಿ ಬಿದ್ದಿದಾರೆ. ನಾವು ಬೀದಿಪಾಲು ಆಗಲು ಅವರೇ ಕಾರಣ ಅಂತಾ ಆರೋಪಿಸಿದ್ದಾರೆ.
ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ತಿದ್ದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸಚಿವರು, ಅಧಿಕಾರಿಗಳ ಜೊತೆ ಮಾತನಾಡೋಣ ಎಂದಾಗ, ತಿರಸ್ಕಾರ ಮಾಡುತ್ತಿದ್ದರು. ಹೀಗಾಗಿ, ಸಾರಿಗೆ ಮುಷ್ಕರ ವಿಫಲವಾಗಲು ಇವರಿಬ್ಬರೇ ನೇರ ಹೊಣೆ ಎಂದು ದೂರಿದ್ದಾರೆ.