ಕರ್ನಾಟಕ

karnataka

ETV Bharat / state

ಲೀಟರ್​ ನಂದಿನಿ ಹಾಲು, ಮೊಸರಿಗೆ 2 ರೂಪಾಯಿ ಹೆಚ್ಚಳ: ನಾಳೆಯಿಂದಲೇ ಹೊಸ ದರ ಜಾರಿ - etv bharat kannada

ನಂದಿನಿ ಹಾಲು, ಮೊಸರಿನ ದರ ಲೀಟರ್​​ಗೆ 2 ರೂಪಾಯಿ ಹೆಚ್ಚಳವಾಗಲಿದ್ದು, ನಾಳೆಯಿಂದಲೇ ದರ ಏರಿಕೆ ಜಾರಿಗೆ ಬರಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ.

kmf-increased-nandini-milk-and-curd-price-by-rs-2-per-litre
ನಂದಿನಿ ಹಾಲು, ಮೊಸರಿನ ಲೀಟರ್ 2 ರೂಪಾಯಿ ಹೆಚ್ಚಳ: ನಾಳೆಯಿಂದಲೇ ಹೊಸ ದರ ಜಾರಿ

By

Published : Nov 23, 2022, 8:08 PM IST

ಬೆಂಗಳೂರು: ನಂದಿನಿ ಹಾಲು, ಮೊಸರಿನ ದರ ಲೀಟರ್​​ಗೆ 2 ರೂಪಾಯಿ ಹೆಚ್ಚಳವಾಗಲಿದ್ದು, ನಾಳೆಯಿಂದಲೇ ದರ ಏರಿಕೆ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ. ಈ ಹಿಂದೆ ನವೆಂಬರ್ 14ರಂದು ಕೆಎಂಎಫ್​ನಿಂದ ಹಾಲು, ಮೊಸರಿನ ದರವನ್ನು 3 ರೂಪಾಯಿ ಏರಿಕೆ ಮಾಡಲಾಗಿತ್ತು, ಬಳಿಕ ಆದೇಶ ಹಿಂಪಡೆಯಲಾಗಿತ್ತು.

ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ನಂತರ ಈ ಕುರಿತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ದರ ಹೆಚ್ಚಳದ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ನಾಳೆಯಿಂದಲೇ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ದರ ಎರಡು ರೂಪಾಯಿ ಹೆಚ್ಚಳವಾಗಲಿದೆ. ನಂದಿನಿ ಟೋನ್ಡ್ ಹಾಲು ಲೀಟರ್​​ಗೆ 37 ರಿಂದ 39 ರೂ. ಆಗಲಿದ್ದು, ಹೋಮೋಜಿನೈಸ್ಡ್ ಟೋನ್ಡ್ ಹಾಲು ಲೀಟರ್​ಗೆ 38 ರಿಂದ 40ರೂ.ಗೆ ಏರಿಕೆ ಆಗಲಿದೆ.

ಹೋಮೋಜಿನೈಸ್ಡ್ ಹಸುವಿನ ಹಾಲು 42 ರಿಂದ 44 ರೂಪಾಯಿಗೆ ಹೆಚ್ಚಳವಾದರೆ, ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43 ರಿಂದ 45 ರೂಪಾಯಿ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಸ್ಟಾಂಡರ್ಡ್ ಹಾಲು 44ರಿಂದ 46 ರೂಪಾಯಿಗೆ ನಂದಿನಿ ಸಮೃದ್ಧಿ ಹಾಲು ಲೀಟರ್​ಗೆ 48ರಿಂದ 50 ರೂಪಾಯಿಗೆ ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.

ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50ರಿಂದ 52 ರೂಪಾಯಿ, ನಂದಿನಿ ಮೊಸರು ಪ್ರತಿ ಕೆಜಿಗೆ 45ರಿಂದ 47 ರೂಪಾಯಿಗೆ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಸಭೆ ನಡೆಸಿದ್ದ ಸಿಎಂ ಬೊಮ್ಮಾಯಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಲಿನ ದರ ಹೆಚ್ಚಳದ ಬಗ್ಗೆ ಸೋಮವಾರ ಸಭೆ ನಡೆಸಿದ್ದರು. ರೈತರಿಗೆ ಸಮಸ್ಯೆ ಆಗಬಾರದು, ಗ್ರಾಹಕರಿಗೂ ತೊಂದರೆ ಆಗಬಾರದು ಎಂದು ತಿಳಿಸಿದ್ದರು. ರೈತರು, ಗ್ರಾಹಕರಿಗೆ ತೊಂದರೆ ಆಗದಂತೆ ಒಂದು ಸೂತ್ರ ರೂಪಿಸುವಂತೆ ಹೇಳಿದ್ದರು. ಅಂತೆಯೇ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ ಎಂ.ಡಿ ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:ಹಾಲಿನ‌ ದರ ಏರಿಕೆಯಿಂದ ರೈತರಿಗೆ, ಗ್ರಾಹಕರಿಗೆ ಸಮಸ್ಯೆ ಆಗಬಾರದೆಂದು ಕೆಎಂಎಫ್​ಗೆ ಸೂಚನೆ: ಸಿಎಂ ಬೊಮ್ಮಾಯಿ‌

ABOUT THE AUTHOR

...view details