ಕರ್ನಾಟಕ

karnataka

ETV Bharat / state

ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಒಟ್ಟು 24 ಜನರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಹಾಗೂ ಇತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪ ಇಂದು ಅರಮನೆ ಮೈದಾನದಲ್ಲಿ ಉದ್ಘಾಟನೆ ಮಾಡಿ ಪ್ರಶಸ್ತಿ ಪ್ರದಾನ ಮಾಡಿದರು.

Kittur Rani Chennamma award program
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

By

Published : Mar 10, 2021, 2:03 PM IST

ಬೆಂಗಳೂರು: ಕೋವಿಡ್ ಸೋಂಕು ಪರೀಕ್ಷೆಗೆ ರಾತ್ರಿ ಹೊತ್ತಲ್ಲಿ ಸ್ಮಶಾನಕ್ಕೆ ಹೋಗಿ ಹೂತಿರುವ ಶವದ ಸ್ವಾಬ್ ಕಲೆಕ್ಟ್ ಮಾಡಿದ ಶೋಭಾ ಸಿ, ಅತ್ಯಾಚಾರವಾಗಿ ಕೋಮಾಕ್ಕೆ ಹೋಗಿದ್ದ ಅಪ್ರಾಪ್ತ ಬಾಲಕಿಗೆ ತಮ್ಮ ಸ್ವಂತ ಖರ್ಚಲ್ಲಿ ಚಿಕಿತ್ಸೆ ನೀಡಿದ ಪೊಲೀಸ್ ಸಿಬ್ಬಂದಿ ಗೌತಮ್, ಪುಟ್ಟ ಮಗುವನ್ನು ಮನೆಯಲ್ಲೇ ಬಿಟ್ಟು, ಆಸ್ಪತ್ರೆಯಿಂದ ಮನೆಗೆ ಹೋಗದೆ ಕೋವಿಡ್ ಕರ್ತವ್ಯ ನಿರ್ವಹಿಸಿದ ಬೆಳಗಾವಿಯ ಸುಗಂಧಾ ಸೇರಿದಂತೆ ಅನೇಕ ಸಾಧಕರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಸನ್ಮಾನಿಸಲಾಯಿತು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಒಟ್ಟು 24 ಜನರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಹಾಗೂ ಇತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟನೆಗೊಳಿಸಿದರು.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ

ನಗರದ ಅರಮನೆ ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ, ಮಹಿಳೆಯರು ಉತ್ಪಾದಿಸಿದ ವಸ್ತುಗಳ ಮಾರಾಟ ಹಾಗೂ ಮಾಹಿತಿಯ 50 ಮಳಿಗೆಗಳನ್ನು ಉದ್ಘಾಟಿಸಲಾಯಿತು.

ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮಹಿಳೆಯರ ಶಕ್ತಿ ಅನಂತ ಮತ್ತು ಅಸೀಮ ಎಂಬುದು ನಿರ್ವಿವಾದ. ಬಜೆಟ್ ಕೂಡಾ ಅದೇ ದಿನ ಮಂಡಿಸಿ, ಎಲ್ಲಾ ಇಲಾಖೆಗಳಿಗಿಂತ ಹೆಚ್ಚುವರಿ ಅನುದಾನವನ್ನು ಮಹಿಳೆಯರ ಸಬಲೀಕರಣಕ್ಕೆ ಎತ್ತಿಡಲಾಗಿದೆ. ನವಭಾರತದಲ್ಲಿ ನಾರಿ ಶಕ್ತಿಗೆ ಅಗ್ರಸ್ಥಾನ ಇದೆ. ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರು ರಾಷ್ಟ್ರನಿರ್ಮಾಣ ಹಾಗೂ ಅರ್ಥಿಕಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ. ಸಮಾನತೆ ಹಾಗೂ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ನಂತರ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಾರ್ಚ್ 8ರಂದು ಬಜೆಟ್ ಇದ್ದ ಕಾರಣ ಕಾರ್ಯಕ್ರಮ ಇವತ್ತು ನಡೆಸಲಾಗುತ್ತಿದೆ. ಬಜೆಟ್ ನಲ್ಲಿ ವಿಶೇಷ ಯೋಜನೆಗಳನ್ನು ನೀಡಿದ್ದಕ್ಕಾಗಿ ಸಿಎಂಗೆ ಧನ್ಯವಾದ. ಕೋವಿಡ್ ಇದ್ದ ಹಿನ್ನೆಲೆ, ಕಳೆದ ವರ್ಷದ ಮಕ್ಕಳ ದಿನಾಚರಣೆಯ ಒಟ್ಟು 13 ಪ್ರಶಸ್ತಿಗಳನ್ನೂ ಇಂದು ಕೊಡಲಾಗುತ್ತಿದೆ ಎಂದರು. ಮಾತೃವಂದನಾ ಸ್ಕೀಂ ನಲ್ಲಿ‌ ದೇಶದಲ್ಲೇ ರಾಜ್ಯಕ್ಕೆ 5 ನೇ ಸ್ಥಾನ ಇದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಕ್ಕೆ ಧನ್ಯವಾದ ಎಂದರು.

ಐದು ಸಂಸ್ಥೆಗಳು, 8 ಮಹಿಳೆಯರು, 5- ಕಲೆ, 1-ಕ್ರೀಡೆ, 1- ಶಿಕ್ಷಣ, 3- ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 24 ಮಹಿಳೆಯರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಅಲ್ಲದೆ 3 ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳಿಗೆ, 3 ಸ್ತ್ರೀಶಕ್ತಿ ಒಕ್ಕೂಟಕ್ಕೆ ಪ್ರಶಸ್ತಿ ನೀಡಲಾಯಿತು. 4 ಕಂದಾಯ ವಿಭಾಗೀಯ ಮಟ್ಟದಲ್ಲಿ 4 ಸ್ತ್ರೀ ಶಕ್ತಿ ಗುಂಪುಗಳಿಗೆ ಯಶೋಧರಮ್ಮ ದಾಸಪ್ಪ ಹೆಸರಲ್ಲಿ ಪ್ರಶಸ್ತಿ ನೀಡಲಾಯಿತು.

ವಿವಿಧ ಮಹಿಳಾ ಸಂಘಗಳಿಗೆ 50 ಸಾವಿರ ಪ್ರಶಸ್ತಿ ಮೊತ್ತದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಯಿತು. ವೈಯಕ್ತಿಕ ಮಹಿಳೆಯರ ಬಹುಮಾನಗಳಿಗೆ 25 ಸಾವಿರ ನಗದು ಬಹುಮಾನ ನೀಡಲಾಯಿತು.

ಹೊಯ್ಸಳ ಶೌರ್ಯ ಪ್ರಶಸ್ತಿ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಸಾಹಸ, ಧೈರ್ಯ ಪ್ರದರ್ಶಿಸಿ ಪ್ರಾಣ ರಕ್ಷಿಸಿದ ಮಕ್ಕಳಾದ ಮಾಸ್ಟರ್ ಆದಿತ್ಯ, ನಮನ ಬಿ.ಕೆ, ಹಾಗೂ ದಿ. ಲೆನಿನ್ ಬೋಪಣ್ಣ ಅವರ ಕುಟುಂಬಕ್ಕೆ ನೀಡಲಾಯಿತು. ಪ್ರಶಸ್ತಿಯು 10 ಸಾವಿರ ನಗದು ಬಹುಮಾನ ಒಳಗೊಂಡಿತ್ತು.

ಇನ್ನು ಇದೇ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಕರ್ತವ್ಯನಿರತ ರಾಜ್ಯದ ಪ್ರಥಮ ಹೃದಯ ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಶೋಭಾ ಸಿ ಅವರನ್ನು ಸನ್ಮಾನಿಸಲಾಯಿತು.

ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅಂಚೆ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಅಂಚೆ ಲಕೋಟೆಯನ್ನು ಹೊರತರಲಾಯಿತು ಹಾಗೂ ಮೂವರು ಹೆಣ್ಣಮಕ್ಕಳಿಗೆ ಸಾಂಕೇತಿಕವಾಗಿ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ನೀಡಲಾಯಿತು.

ಮಾಸ್ಕ್ ಧರಿಸದ ಗಣ್ಯರು:ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಸಿಎಂ ಯಡಿಯೂರಪ್ಪ, ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ.

ಕಾರ್ಯಕ್ರಮದಲ್ಲಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಡಿಸಿಎಂ ಗೋವಿಂದ ಕಾರಜೋಳ, ಮಹಿಳಾ ಆಯೋಗದ ಪ್ರಮೀಳಾ ನಾಯ್ಡು, ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಉಪಸ್ಥಿತರಿದ್ದರು

ABOUT THE AUTHOR

...view details