ದೇವನಹಳ್ಳಿ: ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಇಂದು ಆಗಮಿಸುತ್ತಿದ್ದು ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ. ಹೀಗಾಗಿ ವಿಮಾನ ಪ್ರಯಾಣಿಕರ ಸುಗಮ ಸಂಚಾರಕ್ಕೆ ಬದಲಿ ಮಾರ್ಗ ಬಳಸಲು ಕೆಐಎಎಲ್ ಮನವಿ ಮಾಡಿದೆ.
ಬೆಂಗಳೂರಿನಿಂದ ಏರ್ಪೋರ್ಟ್ನತ್ತ ಬರುವ ಪ್ರಯಾಣಿಕರು ಹೆಬ್ಬಾಳ, ಯಲಹಂಕ ಮಾರ್ಗವಾಗಿ ಪ್ರಯಾಣಿಸಬೇಕು. ಯಲಹಂಕ ನಂತರ ಸರ್ವಿಸ್ ರಸ್ತೆಯಲ್ಲಿ ವಿದ್ಯಾನಗರ ಕ್ರಾಸ್ನಲ್ಲಿ ಬಲಕ್ಕೆ ತಿರುವು ಪಡೆದು ಉತ್ತನಹಳ್ಳಿ, ಮೈಲಾನಹಳ್ಳಿ, ಬೇಗೂರು ಮಾರ್ಗವಾಗಿ ಏರ್ಪೋರ್ಟ್ನ ಸೌತ್ಗೇಟ್ ರಸ್ತೆ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಬಹುದು.
ಇನ್ನು ಏರ್ಪೋರ್ಟ್ನಿಂದ ಬೆಂಗಳೂರು ನಗರದ ಕಡೆ ಪ್ರಯಾಣ ಬೆಳೆಸುವವರು ವಿಮಾನ ನಿಲ್ದಾಣದ ಸೌತ್ಗೇಟ್ ಮೂಲಕ ಬೇಗೂರು, ಮೈಲಾನಹಳ್ಳಿ, ವಿದ್ಯಾನಗರ ಕ್ರಾಸ್, ಯಲಹಂಕ, ಹೆಬ್ಬಾಳ ಮಾರ್ಗವಾಗಿ ಪ್ರಯಾಣಿಸಬೇಕು.
ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ: ಪ್ರಧಾನಮಂತ್ರಿಗಳು ಬೆಳಗ್ಗೆ 9 ಗಂಟೆಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಾಸಕರ ಭವನದ ಆವರಣದಲ್ಲಿರುವ ಕನಕದಾಸ ಹಾಗು ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ವಂದೇ ಭಾರತ್ ರೈಲಿಗೆ ಚಾಲನೆ:ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ವಂದೇ ಭಾರತ್ ಹೈಸ್ಪೀಡ್ ರೈಲಿನ ಉದ್ಘಾಟನೆ ಕಾರ್ಯಕ್ರಮವಿದೆ. ಈ ರೈಲು ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಚೆನ್ನೈ ತಲುಪುತ್ತದೆ. ಬೆಂಗಳೂರು-ಮೈಸೂರು ಪ್ರಯಾಣದ ಅವಧಿಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಲುಪಬಹುದು. ಇದು ಪ್ರಯಾಣಿಕರ ಬಹುದಿನಗಳ ಬೇಡಿಕೆಯೂ ಆಗಿತ್ತು.
ಟರ್ಮಿನಲ್-2 ಉದ್ಘಾಟನೆ: ಹೈಸ್ಪೀಡ್ ರೈಲು ಉದ್ಘಾಟನೆ ಬಳಿಕ ವಿಮಾನ ನಿಲ್ದಾಣಕ್ಕೆ ಆಗಮಿಸಿ 2ನೇ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಟರ್ಮಿನಲ್ -2 ಅಂತಾರಾಷ್ಟ್ರೀಯ ಮತ್ತು ದೇಶಿಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸುಮಾರು 25 ಲಕ್ಷ ಪ್ರಯಾಣಿಕರ ಸಾಮರ್ಥ್ಯವನ್ನು ಟರ್ಮಿನಲ್ ಹೊಂದಿದೆ. ಈಗಿರುವುದು 35 ಲಕ್ಷ ಸಾಮರ್ಥ್ಯವುಳ್ಳದ್ದು. ಇವೆರಡೂ ಸೇರಿದರೆ ದೇಶದ 2ನೇ ಅತಿ ದೊಡ್ಡ ಮತ್ತು ಅತಿ ಹೆಚ್ಚು ಫುಟ್‍ಪ್ರಿಂಟ್ ಹೊದಲಿರುವ ವಿಮಾನ ನಿಲ್ದಾಣವಾಗಲಿದೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು-ಚೆನ್ನೈ ವಂದೇ ಭಾರತ್ ವಿಶೇಷ ರೈಲಿನಲ್ಲಿ ಪ್ರಯಾಣಿಸಬೇಕೇ? ಹೀಗಿದೆ ದರ..