ಬೆಂಗಳೂರು:ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದು, ಮೃತದೇಹವನ್ನು ಇಂದಿರಾ ನಗರದಲ್ಲಿರುವ ಅವರ ಸ್ನೇಹಿತ ಹಾಗು ಕೇರಳ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ಟಿ.ಜಾನ್ ಮನೆಗೆ ಕೊಂಡೊಯ್ಯಲಾಗಿದೆ. ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪಕ್ಷದ ಹಿರಿಯ ನಾಯಕನ ಮೃತದೇಹವನ್ನು ಹುಟ್ಟೂರಿಗೆ ರವಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದಾರೆ. ಬೆಳಿಗ್ಗೆ 11 ಗಂಟೆಯ ನಂತರ ಹೆಚ್ಎಎಲ್ ಏರ್ಪೋರ್ಟ್ನಿಂದ ತಿರುವನಂತಪುರಂಗೆ ಮೃತದೇಹ ರವಾನೆಯಾಗಲಿದೆ.
ಇಂದಿರಾನಗರದ ಜಾನ್ ನಿವಾಸದ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ನಿವಾಸದ ಮುಂದಿನ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ಭದ್ರತೆಯ ನೇತೃತ್ವ ವಹಿಸಿದ್ದಾರೆ.
ಚಾಂಡಿ ಅವರೊಬ್ಬ ಮಾಸ್ ಲೀಡರ್- ಕೆ.ಸಿ.ವೇಣುಗೋಪಲ್ :ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಲ್, ಉಮ್ಮನ್ ಚಾಂಡಿ ಓರ್ವ ಮಾಸ್ ಲೀಡರ್ ಆಗಿದ್ದವರು. ಜನರ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ನಾಯಕ. ಅವರ ಸಾವು ದೇಶಕ್ಕೆ ನಷ್ಟ. ಮೊದಲ ಬಾರಿಗೆ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದವರು ಅವರೇ. ಅದನ್ನು ಸಾಕಷ್ಟು ನಾಯಕರು ದೇಶದಾದ್ಯಂತ ಅನುಸರಿಸಿದರು. ನಾಯಕನಾಗಿ ಎಂದೂ ಅವರು ಸುಮ್ಮನೆ ಇರುತ್ತಿರಲಿಲ್ಲ, ಸದಾ ಕೆಲಸದಲ್ಲಿ ನಿರತರಾಗಿದ್ದವರು. ಊಟ, ನಿದ್ದೆ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ಅವರ ಚಿಂತೆ ಏನಿದ್ದರೂ ಜನರಿಗೆ ಸೇವೆ ಮಾಡುವುದಾಗಿತ್ತು. ಅಂತಹ ಮಹಾನ್ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದರು.
ಸೋಲರಿಯದ ನಾಯಕ- ಸಚಿವ ರಾಮಲಿಂಗಾರೆಡ್ಡಿ : ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಕೇರಳದಲ್ಲಿ ಸೋಲನ್ನೇ ಕಂಡಿರದ ನಾಯಕ ಉಮ್ಮನ್ ಚಾಂಡಿ. 2 ಬಾರಿ ಸಿಎಂ, 11 ಬಾರಿ ಶಾಸಕರಾಗಿ ಗೆದ್ದವರು. ಇಂತಹ ಸಕ್ರಿಯ ರಾಜಕಾರಣಿಯನ್ನು ಕಳೆದುಕೊಂಡಿದ್ದು ಕೇರಳ ರಾಜ್ಯದ ಜನತೆಗೆ ತುಂಬಲಾಗದ ನಷ್ಟ. ನಮ್ಮ ರಾಜ್ಯ ಚುನಾವಣೆಗಳಲ್ಲೂ ಅವರು ಭಾಗಿಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲೂ 2 ಬಾರಿ ಪ್ರಚಾರ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಬಂದು ಪ್ರಚಾರ ಮಾಡಿದ್ದರು. ನಮ್ಮ ಮನೆಗೂ ಒಂದು ಬಾರಿ ಬಂದಿದ್ದರುಲ ಎಂದು ಸ್ಮರಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ:ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ, ಉಮ್ಮನ್ ಚಾಂಡಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾಗಿ ಅವರು ಜನಸೇವೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನ ಕೇರಳ ರಾಜ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು, ಬಂಧುಗಳು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಸಂತಾಪ :ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಅಗಲಿಕೆ ನೋವು ತರಿಸಿದೆ. ಚಾಂಡಿ ಅವರ ನಿಧನದಿಂದಾಗಿ ಒಬ್ಬ ಧೀಮಂತ ನಾಯಕನೊಬ್ಬನನ್ನು ಕಾಂಗ್ರೆಸ್ ಕಳೆದುಕೊಂಡಿದ್ದು, ತುಂಬಲಾರದ ನಷ್ಟವಾಗಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ಕೇರಳ ರಾಜ್ಯದ ಅಭಿವೃದ್ಧಿಗೆ ಚಾಂಡಿ ಅವರು ನೀಡಿದ ಸೇವೆ ಅಪಾರ ಹಾಗೂ ಸ್ಮರಣೀಯವಾದದ್ದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೇರಳದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ನಿಧನ; ಗಣ್ಯರ ಸಂತಾಪ