ಬೆಂಗಳೂರು:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ( KAR-TET) ಯನ್ನು 2023ನೇ ಸಾಲಿನಿಂದ ಎರಡು ಬಾರಿ ಅಂದರೆ, ಜನವರಿ ಹಾಗೂ ಜೂನ್ ತಿಂಗಳಲ್ಲಿ ನಡೆಸಲು ಸೂಚಿಸಲಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರದಾನ ಕಾರ್ಯದರ್ಶಿ ಹೆಚ್.ಎಸ್. ಶಿವಕುಮಾರ್ ಆದೇಶ ಹೊರಡಿಸಿದ್ದು, ವರ್ಷಕ್ಕೆ ಎರಡು ಸಲ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.
ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಮಾದರಿಯಲ್ಲೇ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಹಲವು ಕಾರಣದಿಂದಾಗಿ ಪ್ರತಿ ವರ್ಷವೂ ಟಿಇಟಿ ಪರೀಕ್ಷೆಯು ವಿಳಂಬವಾಗುತ್ತಿದೆ. ಇತ್ತ ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕೋರ್ಸ್ ಮುಗಿಸಿ ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಆದರೆ ಟಿಇಟಿ ಪರೀಕ್ಷೆ ನಡೆಯದೇ, ಈ ಅಭ್ಯರ್ಥಿಗಳು ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಇನ್ಮುಂದೆ ವರ್ಷಕ್ಕೆ ಎರಡು ಸಲ ಅಂದರೆ ಜನವರಿ, ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.