ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ತುಸು ಹೆಚ್ಚಾಗಿದೆ. ಇಂದು ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣವಿತ್ತು. ಹವಾಮಾನದಲ್ಲಿ ಭಾರಿ ಬದಲಾವಣೆ ಕಂಡು ಬಂದಿದ್ದು, ತಂಪು ವಾತಾವರಣದಿಂದ ಪಾರಾಗಲು ಜನರು ಬೆೆಂಕಿ ಕಾಯಿಸಿಕೊಳ್ಳುತ್ತಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಬೀದರ್, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಶೀತ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಪ್ರದೇಶಗಳಿಗೆ ಎಚ್ಚರಿಕೆ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಬೀದರ್ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಉಷ್ಣಾಂಶ ಅಂದರೆ 5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಅತೀ ಕಡಿಮೆ ಉಷ್ಣಾಂಶ ಎಲ್ಲೆಲ್ಲಿ?:ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಅವರು, ರಾಜ್ಯದ ಎಲ್ಲೆಡೆ ಒಣಹವೆ ಮುಂದುವರಿದಿದೆ. ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆಯಲ್ಲಿ 6, ಬಳ್ಳಾರಿಯಲ್ಲಿ 7.5, ಧಾರವಾಡದಲ್ಲಿ 9.8, ಹಾಗೂ ಬೆಳಗಾವಿಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಒಳನಾಡಿನ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಅತೀ ಕಡಿಮೆ ಉಷ್ಣಾಂಶ ಕಂಡುಬಂದಿದೆ.
ಬೆಂಗಳೂರಿನ ವಾತಾವರಣ ಹೇಗಿದೆ?: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಶೀತಲ ಮುನ್ನೆಚ್ಚರಿಕೆ ಏನೂ ಇಲ್ಲ. ಬೆಂಗಳೂರಲ್ಲಿ ಇಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 14.3 ಡಿಗ್ರಿ ಇರಲಿದೆ. ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 26.6, ಕನಿಷ್ಟ 13.8 ದಾಖಲಾಗಿದೆ. ಬೆಂಗಳೂರು ಏರ್ಪೋರ್ಟ್ ಬಳಿ ಗರಿಷ್ಠ 27.4 ಡಿಗ್ರಿ ದಾಖಲಾಗಿದೆ. ಆಕಾಶ ಸಾಮಾನ್ಯವಾಗಿ ನಿರ್ಮಲವಾಗಿರಲಿದೆ. ಇಂದು ಮುಂಜಾನೆ ದಟ್ಟ ಮಂಜು ಕಾಣಿಸಿದೆ. ಈಶಾನ್ಯ ರಾಜ್ಯಗಳಿಂದ ಕಡಿಮೆ ಒತ್ತಡದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಶೀತ ವಾತಾವರಣ ಉಂಟಾಗಿದೆ. ಚಳಿ ತೀವ್ರಗೊಂಡಿದೆ. ಜನರು ಕಾಫಿ ಸೇರಿದಂತೆ ಬಿಸಿ ಬಿಸಿ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.