ಕರ್ನಾಟಕ

karnataka

ETV Bharat / state

ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕ ಸಮೃದ್ಧ ಎಟಿಎಂ: ಹೆಚ್​.ಡಿ.ಕುಮಾರಸ್ವಾಮಿ ಲೇವಡಿ

ಮುಂಬರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ ಎಂದು ಹೆಚ್​.ಡಿ.ಕುಮಾರಸ್ವಾಮಿ ಕಾಂಗ್ರೆಸ್​ ಸರ್ಕಾರವನ್ನು ಟೀಕಿಸಿದ್ದಾರೆ.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

By ETV Bharat Karnataka Team

Published : Oct 13, 2023, 4:55 PM IST

ಬೆಂಗಳೂರು : ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ, ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್‌ಗಳಲ್ಲಿ ಕುಣಿಯುತ್ತಿದೆ. ಪಂಚ ರಾಜ್ಯಗಳ ಪಾಲಿಗೆ ಕರ್ನಾಟಕ ಸಮೃದ್ಧ ಎಟಿಎಂ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಹೆಚ್​ಡಿಕೆ, ಐಟಿ ದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು?, ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು?, ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದಿದ್ದಾರೆ.

ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42 ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪರ್ಸಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

23 ಬಾಕ್ಸ್​ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ. ಅಲ್ಲಿಗೆ ಚುನಾವಣೆಗಾಗಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎನ್ನುವುದು ಸತ್ಯ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್​ಗೆ 'ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ'ಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪರ್ಸೆಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು? ಈಗ ಹೇಳಿ ಸನ್ಮಾನ್ಯ ಸಿದ್ದರಾಮಯ್ಯ ನವರೇ 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಇಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು? ದಯಮಾಡಿ ಹೇಳಿ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ರೈತರು ಬರ, ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಗುತ್ತಿಗೆದಾರರು ಅಯೋಮಯ ಸ್ಥಿತಿಯಲ್ಲಿದ್ದಾರೆ. ಆದರೂ ಕಲೆಕ್ಷನ್ 'ಕೈ' ಚಳಕ ಜೋರಾಗಿದೆ. ಪಂಚ ರಾಜ್ಯಗಳ ಪಾಲಿಗೆ ಕರ್ನಾಟಕ ಸಮೃದ್ಧ ಎಟಿಎಂ ಆಗಿದೆ. ಕಾವೇರಿ ನೀರು ತಮಿಳುನಾಡಿಗೆ ನಿರಂತರ ಹರಿಯುತ್ತಿದ್ದರೆ, ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲಾಗುತ್ತಿದ್ದಾಳೆ. ಅಂದಿನಿಂದಲೂ ಇದೇ ಕಥೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್​ಗೆ ಹಬ್ಬ. ಈಗಲೂ ಅದೇ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ. ವೋಟು ಕೊಟ್ಟ ತಪ್ಪಿಗೆ ಕಾಂಗ್ರೆಸ್ ಉಂಡು ಹೋಗುತ್ತಿದೆ, ಕೊಂಡು ಹೋಗುತ್ತಿದೆ. ಇದು ಕನ್ನಡಿಗರ ಕರ್ಮ ಎಂದು ಟೀಕಿಸಿದ್ದಾರೆ.

ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ:ಬೆಂಗಳೂರಿನಲ್ಲಿ ನಡೆದಿರುವ ಐಟಿ ದಾಳಿ ವಿಚಾರವಾಗಿಚಕ್ರವರ್ತಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಈಗ ಸಿಕ್ಕಿರುವ 42 ಕೋಟಿ ಹಣದ ಬಗ್ಗೆ ತನಿಖೆ ಆಗಬೇಕು. ಆಗ ಇದು ಯಾರ ಹಣ? ಸಿದ್ದರಾಮಯ್ಯ ಹಣನಾ? ಡಿ.ಕೆ.ಶಿವಕುಮಾರ್ ಹಣನಾ? ಅಂತ ಗೊತ್ತಾಗುತ್ತದೆ. ಈ ಹಣವನ್ನು ಎಐಸಿಸಿಗೆ ಕಳಿಸಲು ಸಂಗ್ರಹ ಮಾಡಲಾಗಿತ್ತು. ಪಂಚ ರಾಜ್ಯಗಳ ಚುನಾವಣೆಗೆ ಕಳಿಸಲು ಈ ಹಣ ಇಟ್ಟುಕೊಂಡಿದ್ದರು ಎಂದು ಹಲವರು ಹೇಳುತ್ತಿದ್ದಾರೆ.

ಐಟಿ ದಾಳಿಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಖಂಡನೆ ಮಾಡಬೇಕಿತ್ತು. ಆದರೆ ಅವರು ಖಂಡನೆ ಮಾಡುತ್ತಿಲ್ಲ. ಕಾಂಗ್ರೆಸ್ ನವರಿಗೂ ಗುತ್ತಿಗೆದಾರರಿಗೂ ನೇರ ಸಂಬಂಧ ಇದೆ. ಕಳೆದ ಸಲ ನಮ್ಮ ಮೇಲೆ 40% ಕಮೀಷನ್ ಆರೋಪವನ್ನು ದಾಖಲೆ ಇಲ್ಲದೇ ಮಾಡಿದ್ದರು. ಆಗಲೇ ನಾವು ಇವರು ಕಾಂಗ್ರೆಸ್ ಏಜೆಂಟರು ಅಂದಿದ್ದೆವು. ಗುತ್ತಿಗೆದಾರರು ಮತ್ತು ಕಾಂಗ್ರೆಸ್ ನವರು ಅಣ್ಣತಮ್ಮಂದಿರ ಹಾಗೆ ಈ ಹಣವನ್ನು ಕೇಂದ್ರದ ಎಐಸಿಸಿಗೆ ಕಳಿಸಿಕೊಡುವ ತಯಾರಿ ಆಗಿತ್ತು. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇದು ಐಸಿಸಿಗೆ ಹೋಗಬೇಕಿದ್ದ ಹಣ ಎಂದು ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

ಕಳೆದ ವಿಧಾನಸಭೆ ಚುನಾವಣೆಗೂ ಮೊದಲು ಪ್ರಧಾನಿ ಮೋದಿ, ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಕೇಂದ್ರದ ಕಾಂಗ್ರೆಸ್​ಗೆ ಎಟಿಎಂ‌ ಆಗುತ್ತದೆ. ಇಲ್ಲಿ ಭ್ರಷ್ಟಾಚಾರ ಮಾಡಿ ಎಐಸಿಸಿಗೆ ಹಣ ಕೊಡುತ್ತಾರೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲಿಸಬೇಡಿ ಅಂದಿದ್ದರು. ಇವತ್ತು 42 ಕೋಟಿ ಹಣ ಸಿಕ್ಕಿರೋದು ಇದಕ್ಕೆ ಉದಾಹರಣೆ ಎಂದರು.

ಇದನ್ನೂ ಓದಿ:ಪಂಚ ರಾಜ್ಯ ಚುನಾವಣೆಗೆ ರಾಜ್ಯದ ಹಣ ಬಳಕೆ ಆರೋಪ ಸುಳ್ಳು: ಅವರು ನೋಡಿದ್ದಾರಾ ಸಿಎಂ ಪ್ರಶ್ನೆ

ABOUT THE AUTHOR

...view details