ಬೆಂಗಳೂರು:ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಸಬಾರದು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದೆ. ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಬರೆದ ಪತ್ರದಲ್ಲಿ, ಸಚಿವ ಸಂಪುಟದ ಉಪ ಸಮಿತಿಯು ಸ್ವಯಂ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಮಾಡುವುದಾದರೆ ಅದಕ್ಕೆ ನಮ್ಮ ತಕರಾರಿಲ್ಲ. ಆದರೆ, ಒಳಮೀಸಲಾತಿಗೆ ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸುವುದಾದರೆ ನಮ್ಮ ಆಕ್ಷೇಪಣೆ ಇದೆ ಎಂದು ತಿಳಿಸಿದೆ.
ಸದಾಶಿವ ಆಯೋಗದ ವರದಿ ನಾನಾ ಕಾರಣಗಳಿಗಾಗಿ ದೋಷಪೂರಿತವಾಗಿದೆ. ಸೋರಿಕೆ ಆಗಿರುವ ಈ ವರದಿಯಲ್ಲಿನ ಅಂಶಗಳನ್ನು ವಿರೋಧಿಸಿ ಪರಿಶಿಷ್ಟ ಜಾತಿಗೆ ಸೇರಿರುವ ಶೇ.70 ರಷ್ಟು ಸಮುದಾಯಗಳು ಹಿಂದಿನ 12 ವರ್ಷಗಳಿಂದ ಹೋರಾಟ, ಚಳುವಳಿಗಳನ್ನು ನಡೆಸುತ್ತಾ ಬಂದಿರುವುದು ತಮಗೆ ತಿಳಿದ ಸಂಗತಿ. ಇಲ್ಲಿಯವರೆಗೆ ವರದಿಯ ಸತ್ಯಾಸತ್ಯತೆ ಅರಿಯಲು ಸಾರ್ವಜನಿಕ ಚರ್ಚೆಗೆ ಒಳಪಡಿಸಿಲ್ಲ. ಶಾಸನ ಸಭೆಗಳಲ್ಲೂ ಚರ್ಚೆ ಆಗಿಲ್ಲ. ಹೀಗಾಗಿ ಪ.ಜಾತಿಯ ಸಹೋದರ ಸಮುದಾಯಗಳಲ್ಲಿ ವೈಮನಸ್ಸು ಉಂಟಾಗಲು ಕಾರಣವಾಗುತ್ತಿದೆ. ಪ.ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಆಕ್ಷೇಪಣೆಗಳನ್ನು ಪಡೆಯದ ಏಕಮುಖವಾಗಿ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ನಮ್ಮ ಬಲವಾದ ವಿರೋಧವಿದೆ ಎಂದು ಹೇಳಿದೆ.
ಪ.ಜಾತಿಗಳಲ್ಲಿರುವ ಸಮುದಾಯಗಳ ಜೀವನ ವಿಧಾನ, ಉದ್ಯೋಗ, ಆರ್ಥಿಕತೆ, ಶಿಕ್ಷಣ ಮುಂತಾದ ಅಂಶಗಳ ಕುರಿತು ಸತ್ಯಾಂಶಗಳನ್ನು ಮರೆಮಾಚಿದೆ. ಪ.ಜಾತಿಯಲ್ಲಿ ಗುರುತಿಸಲ್ಪಟ್ಟಿರುವ ಅಲೆಮಾರಿ, ವಿಮುಕ್ತ ಅಲೆಮಾರಿ ಸಮುದಾಯಗಳು, ದೇವದಾಸಿ, ಸಫಾಯಿ ಕರ್ಮಚಾರಿ ಇತ್ಯಾದಿ ಅವಕಾಶ ವಂಚಿತ(ನಿರ್ಲಕ್ಷಿತ ಸಮುದಾಯಗಳನ್ನು ಪ್ರತ್ಯೇಕ ಗುಂಪು ಮಾಡಿ ಕಾರ್ಯಸಾಧುವಲ್ಲದ ರೀತಿಯ ವರ್ಗೀಕರಣ) ಭಾಗವನ್ನು ಈ ಸಮುದಾಯಗಳಿಗೆ ನಿಗದಿಪಡಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.