ಬೆಂಗಳೂರು: ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಕೈಗೊಳ್ಳಲಾದ ನಿರ್ಮಾಣ ಕಾಮಗಾರಿಗಳ ಮಟ್ಟವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಿಸುವ ಉದ್ದೇಶ ಹೊಂದಿರುವ 2023ನೇ ಸಾಲಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಇಂದು ಅಂಗೀಕಾರಗೊಂಡಿತು.
ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ಪರ್ಯಾಲೋಚಿಸಿ ಹಲವು ಸದಸ್ಯರು ಚರ್ಚಿಸಿದ ಬಳಿಕ ಸದನದಲ್ಲಿ ಧ್ವನಿ ಮತದ ಅಂಗೀಕಾರ ದೊರೆಯಿತು. ವಿಧೇಯಕ ಕುರಿತು ಮಾತನಾಡಿದ ಹೆಚ್.ಕೆ ಪಾಟೀಲ್ ಅನುಸೂಚಿತ ಜಾತಿ/ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಕೈಗೊಳ್ಳುವ ನಿರ್ಮಾಣ ಕಾಮಗಾರಿ ಮೊತ್ತವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಿಸಲಾಗುತ್ತದೆ. ಎಸ್ ಆರ್ ದರ ಗಮನದಲ್ಲಿಟ್ಟುಕೊಂಡು ತಿದ್ದುಪಡಿ ತರಲಾಗಿದೆ. ಶೇ.62ರಷ್ಟು ಮೊದಲ ಟೆಂಡರ್ ನಲ್ಲಿ, ಶೇ.82ರಷ್ಟು 2ನೇ ಟೆಂಡರ್ನಲ್ಲಿ ಎಸ್ಸಿ- ಎಸ್ಟಿ ಸಮುದಾಯದವರು ಭಾಗವಹಿಸಿದ್ದಾರೆ. ಇದು ಸಾಮಾಜಿಕ ನ್ಯಾಯ ಒದಗಿಸಲು ದೊಡ್ಡ ಅಸ್ತ್ರವಾಗಿದೆ ಎಂದು ಹೇಳಿ ಒಪ್ಪಿಗೆ ಸೂಚಿಸುವಂತೆ ಕೋರಿದರು.
ಇದನ್ನೂ ಓದಿ:ಕನ್ನಡಿಗರಿಗೆ ಗ್ರೂಪ್ ಸಿ, ಡಿ ದರ್ಜೆ ಉದ್ಯೋಗ ಮೀಸಲಾತಿಯ ಖಾಸಗಿ ವಿಧೇಯಕ ಅಂಗೀಕಾರ
ಎಸ್ಸಿ-ಎಸ್ಟಿ ಸಮುದಾಯಕ್ಕೆ ಆದ್ಯತೆ ಸಿಗಬೇಕು:ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ "ಈ ತಿದ್ದುಪಡಿ ಅಗತ್ಯವಿತ್ತು. ಇದನ್ನು ಸ್ವಾಗತಿಸುತ್ತೇವೆ. ಅಂಬೇಡ್ಕರ್ ಅಭಿವೃದ್ದಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಎಸ್ಸಿ - ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಪ್ರೋತ್ಸಾಹ ನೀಡಬೇಕು. ನಮ್ಮ ಪಕ್ಷದ ನಿಲುವು ಕೂಡ ತಿದ್ದುಪಡಿ ತರುವುದೇ ಆಗಿತ್ತು. ಆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಂತಾಗುತ್ತದೆ. ಶಿಕ್ಷಣ, ಉದ್ಯೋಗ ಸಬಲೀಕರಣದಲ್ಲಿ ಆ ಸಮುದಾಯಕ್ಕೆ ಆದ್ಯತೆ ಸಿಗಬೇಕು" ಎಂದು ಹೇಳಿದರು.
ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯದವರ ಹೆಸರಿನಲ್ಲಿ ಬೇರೆಯವರು ಉಪ ಗುತ್ತಿಗೆ ಪಡೆದು ಕಾಮಗಾರಿ ನಿಲ್ಲಬೇಕು. ಅವರಿಗೆ ಯಂತ್ರೋಪಕರಣ ಕೊಡಿಸಬೇಕು. ಸೂಕ್ತ ತರಬೇತಿ ನೀಡಿ ಪ್ರೋತ್ಸಾಹಿಸಬೇಕು ಎಂದರು. ಕಾಂಗ್ರೆಸ್ ಸದಸ್ಯ ಶಿವಲಿಂಗೆಗೌಡ ಮಾತನಾಡಿ ಈ ತಿದ್ದುಪಡಿ ಒಳ್ಳೆಯದು. ಆದರೆ 20ರಿಂದ 50ರಷ್ಟು ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೊಬಿಲೈಝಷನ್ ಫಂಡ್ (ಮುಂಗಡ ಹಣ) ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ಬಿ.ಆರ್ ಪಾಟೀಲ್ ಸೇರಿದಂತೆ ಹಲವು ಸದಸ್ಯರು ಚರ್ಚಿಸಿದ ನಂತರ ಮಾತನಾಡಿದ ಹೆಚ್.ಕೆ ಪಾಟೀಲ್ ಅವರು ಯಂತ್ರೋಪಕರಣ ನೀಡಬೇಕು ಎಂಬುದು ಒಳ್ಳೆಯ ಸಲಹೆ. ಬೆಳಗಾವಿಯಲ್ಲಿರುವ ಎಂಜಿನಿಯರಿಂಗ್ ಸಂಸ್ಥೆಯಿಂದ ತರಬೇತಿ ಕೊಡಿಸಲು ಪ್ರಯತ್ನಿಸಲಾಗುವುದು. ಮುಂಗಡ ಹಣ ಕೊಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಶಾಸಕರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು. ನಂತರ ಸಭಾಧ್ಯಕ್ಷ ಯು.ಟಿ ಖಾದರ್ ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿ ಮತದ ಅಂಗೀಕಾರ ಪಡೆಯಿತು.
ಇದನ್ನೂ ಓದಿ:ಹಾಲಿನ ದರ ಹೆಚ್ಚಳ ಸಂಬಂಧ ಸಿಎಂ ಜೊತೆಗಿನ ಸಭೆ ಬಳಿಕ ತೀರ್ಮಾನ: ಸಚಿವ ಕೆ.ವೆಂಕಟೇಶ್