ಬೆಂಗಳೂರು: ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವಿನ ಜಟಾಪಟಿಗೆ ಮಳೆಗಾಲದ ಅಧಿವೇಶನದ ವೇದಿಕೆ ಸಜ್ಜಾಗಿದೆ. ನಾಳೆಯಿಂದ ಪ್ರಾರಂಭವಾಗಲಿರುವ ಕಲಾಪದಲ್ಲಿ ಪ್ರತಿಪಕ್ಷ ಹಲವು ವಿಚಾರಗಳ ಬಗ್ಗೆ ಸರ್ಕಾರದ ಕಿವಿ ಹಿಂಡಲು ತವಕದಲ್ಲಿದ್ದರೆ, ಇತ್ತ ಸರ್ಕಾರ ಪ್ರತಿಪಕ್ಷಗಳ ಪ್ರಶ್ನೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧವಾಗಿದೆ.
ನಾಳೆಯಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವಿನ ಸದನ ಕದನ ಕುತೂಹಲಕ್ಕೆ ಸಾಕ್ಷಿಯಾಗಲಿದೆ. ಕೋವಿಡ್ ಆರಂಭಿಕ ತಿಂಗಳಾದ ಮಾರ್ಚ್ ಅಧಿವೇಶನದ ಬಳಿಕ ಸುದೀರ್ಘ ಆರು ತಿಂಗಳ ಅಂತರದಲ್ಲಿ ತಡವಾಗಿ ಮಳೆಗಾಲದ ಅಧಿವೇಶನವನ್ನು ನಡೆಸಲಾಗುತ್ತಿದೆ. ಪ್ರತಿಪಕ್ಷಗಳ ಮುಂದೆ ಉತ್ತರ ಸಿಗದ ಹಲವು ಪ್ರಶ್ನೆಗಳು, ಅನುಮಾನಗಳು, ಆಕ್ರೋಶ, ಆರೋಪಗಳಿದ್ದು, ಅವುಗಳೆಲ್ಲವನ್ನೂ ಸರ್ಕಾರದ ಮೇಲೆ ಪ್ರಯೋಗಿಸಲು ಸರ್ವಸನ್ನದ್ಧವಾಗಿದೆ. ಇತ್ತ ಸರ್ಕಾರ ಪ್ರತಿಪಕ್ಷಗಳ ವಾಗ್ದಾಳಿಯನ್ನು ಸಮರ್ಥವಾಗಿ ಎದುರಿಸಲು ಪ್ರತಿತಂತ್ರವನ್ನು ರೂಪಿಸಿದೆ.
ಸರ್ಕಾರದ ಕಿವಿ ಹಿಂಡಲು ಪ್ರತಿಪಕ್ಷ ರೆಡಿ:
ಅನೇಕ ಜ್ವಲಂತ ವಿಚಾರಗಳ ಬಗ್ಗೆ ಸರ್ಕಾರದ ಕಿವಿ ಹಿಂಡಲು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಎಲ್ಲಾ ತಯಾರಿಗಳನ್ನು ನಡೆಸಿದೆ.
ಪ್ರಮುಖವಾಗಿ ಕೋವಿಡ್ ವಿಚಾರವಾಗಿ ಸರ್ಕಾರವನ್ನು ಬಗ್ಗು ಬಡಿಯಲು ಪ್ರತಿಪಕ್ಷ ಅಸ್ತ್ರಗಳನ್ನು ಸಿದ್ಧಗೊಳಿಸಿದೆ. ಕೋವಿಡ್ ಪರಿಕರ ಖರೀದಿಯಲ್ಲಿನ ಹಗರಣ ಆರೋಪದ ಮೂಲಕ ಸರ್ಕಾರವನ್ನು ಟಾರ್ಗೆಟ್ ಮಾಡಲು ಪ್ರತಿಪಕ್ಷ ರೆಡಿಯಾಗಿದೆ. ಕೋವಿಡ್ ಖರ್ಚು, ವೆಚ್ಚದ ಬಗ್ಗೆ ಪಕ್ಕಾ ಲೆಕ್ಕಕೊಡುವಂತೆ ಕಾಂಗ್ರೆಸ್ ಆಗ್ರಹಿಸಲಿದೆ. ಈ ಸಂಬಂಧ ತನ್ನಲ್ಲಿರುವ ದಾಖಲಾತಿಗಳನ್ನು ಮುಂದಿಟ್ಟು ಸರ್ಕಾರದ ಕಿವಿ ಹಿಂಡಲು ಮುಂದಾಗಿದೆ.
ಬಳಿಕ ಕೋವಿಡ್ ಪ್ರಕರಣಗಳಲ್ಲಿ ಏರಿಕೆ, ನಿರ್ವಹಣೆಯಲ್ಲಿನ ವೈಫಲ್ಯಗಳ ಬಗ್ಗೆ ಸರ್ಕಾರವನ್ನು ಬೊಟ್ಟು ಮಾಡಲು ಸಿದ್ಧವಾಗಿದೆ. ಜೊತೆಗೆ ಆರ್ಥಿಕ ಸಂಕಷ್ಟ, ಕೇಂದ್ರದಿಂದ ಅನುದಾನ, ಜಿಎಸ್ಟಿ ಪರಿಹಾರ ಕಡಿತ, ಹೆಚ್ಚುವರಿ ಸಾಲ ಎತ್ತುವಳಿ, ಗಲಭೆ ಪ್ರಕರಣ, ಅತಿವೃಷ್ಟಿ ಪರಿಹಾರ, ಡ್ರಗ್ಸ್ ದಂಧೆ ಬಗ್ಗೆ ಸರ್ಕಾರದ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿವೆ.