ಮುಂಬೈ/ಬೆಂಗಳೂರು:ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬ್ರಾಂಡ್ ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸೋಮವಾರ ಮಹಾರಾಷ್ಟ್ರದ ವಿದರ್ಭ ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ. 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಹಾಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಎಂಎಫ್ ಮುಂದಾಗಿದೆ.
ಕೆಎಂಎಫ್ ಭಾನುವಾರ ತನ್ನ ನಂದಿನಿ ಬ್ರಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿದರ್ಭ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನಾಗ್ಪುರ, ವಾರ್ಧಾ, ಯಾವತ್ಮಲ್ ಮತ್ತು ಚಂದ್ರಪುರದಲ್ಲಿ ಮಾರುಕಟ್ಟೆಗಳಿಗೂ ವಿಸ್ತರಿಸಲು ಯೋಜಿಸುತ್ತಿದೆ. ಇದರೊಂದಿಗೆ, ಕರ್ನಾಟಕದ ವಿಜಯಪುರದ ಡೈರಿಯಲ್ಲಿ ಸಂಸ್ಕರಿಸಿದ ಹಾಲು ಸುಮಾರು 650 ಕಿ.ಮೀ. ಸಾಗಿ ನಂತರ ಚಂದ್ರಪುರವನ್ನು ತಲುಪುತ್ತದೆ. ಅಲ್ಲಿ ಅದನ್ನು ಸ್ಥಳೀಯ ಡೈರಿ ಬ್ರಾಂಡ್ ಸ್ವಪ್ನ ಪೂರ್ತಿಯ ಸಹಯೋಗದೊಂದಿಗೆ ಪ್ಯಾಕ್ ಮಾಡಲಾಗುತ್ತದೆ.
ನಾವು ಮುಂಬೈನಲ್ಲಿ ಎರಡು ಮತ್ತು ಗೋವಾ, ಪುಣೆಯಲ್ಲಿ ತಲಾ ಒಂದು ಪ್ಲಾಂಟ್ ಖರೀದಿಸಲು ಯೋಜಿಸುತ್ತಿದ್ದೇವೆ. ಡೈರಿ ಸಂಸ್ಕರಣಾ ಘಟಕಗಳನ್ನು ಸ್ವಾಧೀನಪಡಿಸಿಕೊಂಡು ನಾವು ₹1,000 ಕೋಟಿ ವೆಚ್ಚದಲ್ಲಿ ವಿಸ್ತರಣಾ ಯೋಜನೆಯನ್ನು ರೂಪಿಸಿದ್ದೇವೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ.