ಕರ್ನಾಟಕ

karnataka

ETV Bharat / state

ಬುನಾದಿ ಹಂತದ ಕರ್ನಾಟಕ ರಾಜ್ಯ ಪಠ್ಯಕ್ರಮ ಚೌಕಟ್ಟು ಬಿಡುಗಡೆ

ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2022ರ ಆಧಾರದ ಮೇಲೆ 3 ರಿಂದ 8 ವಯೋಮಾನದ ಮಕ್ಕಳ ಶಿಕ್ಷಣಕ್ಕಾಗಿ ಬುನಾದಿ ಹಂತದ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚನೆ ಮಾಡಿದ ಮೊದಲ ರಾಜ್ಯ ಕರ್ನಾಟಕ.

Education Minister BC Nagesh
ಶಿಕ್ಷಣ ಸಚಿವ ಬಿ.ಸಿ ನಾಗೇಶ್

By

Published : Mar 25, 2023, 11:36 AM IST

ಬೆಂಗಳೂರು: ಬುನಾದಿ ಹಂತದ ಕರ್ನಾಟಕ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿವೆ. 3 ರಿಂದ 8 ವಯೋಮಾನದ ಮಕ್ಕಳ ಶಿಕ್ಷಣಕ್ಕಾಗಿ ರಚಿತವಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಕ್ಟೋಬರ್-2022ರಲ್ಲಿ ಬಿಡುಗಡೆ ಮಾಡಲಾಗಿತ್ತು.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರದ ಮೇಲೆ ಕರ್ನಾಟಕ ರಾಜ್ಯದ ಸನ್ನಿವೇಶಕ್ಕೆ ತಕ್ಕಂತೆ ಬುನಾದಿ ಹಂತದ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಮಾಡುವ ಸಂಬಂಧಿಸಿದ ಇಲಾಖೆಗಳ ಉಪಯೋಗಕ್ಕಾಗಿ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2022ರ ಆಧಾರದ ಮೇಲೆ 3 ರಿಂದ 8 ವಯೋಮಾನದ ಮಕ್ಕಳ ಶಿಕ್ಷಣಕ್ಕಾಗಿ ಬುನಾದಿ ಹಂತದ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚನೆ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

ಪ್ರಸ್ತುತ ರಾಜ್ಯದ ಅಂಗನವಾಡಿಗಳಲ್ಲಿ ಅನುಷ್ಠಾನದಲ್ಲಿರುವ ಚಿಲಿಪಿಲಿ ಹಾಗೂ ಪ್ರಾಥಮಿಕ ಶಾಲೆಗಳ ನಲಿಕಲಿ ಪದ್ಧತಿಯ ಪಠ್ಯಕ್ರಮದಲ್ಲಿ ಮಾರ್ಪಾಡುಗಳನ್ನು ರಾಜ್ಯ ಪಠ್ಯಕ್ರಮ ಚೌಕಟ್ಟು ಪ್ರಸ್ತಾಪಿಸುತ್ತದೆ. ತನ್ಮೂಲಕ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಬುನಾದಿ ಹಂತದ 3 ರಿಂದ 8 ವಯೋಮಾನದ ಮಕ್ಕಳ ಶಿಕ್ಷಣದಲ್ಲಿ ಕೈಗೊಳ್ಳಬೇಕಾದ ಬದಲಾವಣೆಗಳನ್ನು ಪ್ರಭಾವಿಸುತ್ತದೆ ಹಾಗೂ ಸಲಹೆ ನೀಡಲ್ಪಟ್ಟ ಮಾರ್ಪಾಡುಗಳಿಗೆ ಕಾರಣಗಳನ್ನು ವಿಷದೀಕರಿಸುತ್ತದೆ. ಪ್ರಸ್ತಾಪಿಸಲ್ಪಟ್ಟ ಬದಲಾವಣೆಗಳು ವ್ಯವಸ್ಥೆಯಲ್ಲಿನ ಸುಧಾರಣೆಗಳ ಜೊತೆ ಪೂರ್ವ ಬಾಲ್ಯಾವಸ್ಥೆ ಹಂತದ ಮಕ್ಕಳ ಶಿಕ್ಷಣದ ಗುಣಮಟ್ಟದ ಪರಿಣಾಮಕಾರಿ ಅಭಿವೃದ್ಧಿಯ ಅಂಶವನ್ನೂ ಸಹ ಒಳಗೊಂಡಿವೆ.

ಪಠ್ಯಕ್ರಮ ಚೌಕಟ್ಟು ಈ ಕೆಳಗಿನ ಅಂಶಗಳನ್ನು ವಿವರಿಸುತ್ತದೆ..

- ಶಾಲಾ ಶಿಕ್ಷಣದ ನೂತನ ಬುನಾದಿ ಹಂತದ ಪರಿಕಲ್ಪನೆ ಮತ್ತು ಉದ್ದೇಶಗಳು.

- ಪಠ್ಯಕ್ರಮ ಸಮನ್ವಯ, ಮೇಲ್ಮುಖ ನಿರಂತರತೆ ಮತ್ತು ಬೆಳವಣಿಗೆ ಹಂತದ ಎರಡು ಉಪ ಹಂತಗಳಾದ ಅಂದರೆ 3 ರಿಂದ 6 ವರ್ಷ ಹಾಗೂ 6 ರಿಂದ 8 ವರ್ಷಗಳ ನಡುವೆ ತಡೆಯಿಲ್ಲದ ಚಲನೆ ಇವುಗಳಿಗೆ ಸಂಬಂಧಿಸಿದ ರಚನಾತ್ಮಕ ಮಾರ್ಪಾಡಿನ ಅಗತ್ಯತೆ, ತಾರ್ಕಿಕ ಆಧಾರ ಮತ್ತು ಪ್ರಾಮುಖ್ಯತೆ.

- ಬುನಾದಿ ಹಂತಕ್ಕೆ ಸಂಬಂಧಿಸಿದಂತೆ ವಯೋಮಾನ / ಬೆಳವಣಿಗೆಗೆ ಸಮರ್ಪಕವಾದ ಪಠ್ಯ ವಿಷಯ, ಸಂರಚನೆ ಮತ್ತು ಉದ್ದೇಶಗಳು ಹಾಗೂ ಫಲಿತಾಂಶ ಕೇಂದ್ರಿತ ಪಠ್ಯಕ್ರಮ.

- ಬುನಾದಿ ಹಂತದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2022ರಲ್ಲಿ ಪ್ರತಿಪಾದಿಸಿದಂತೆ ಆಟ ಮತ್ತು ಅನ್ವೇಷಣೆ ಆಧಾರಿತ ಬೋಧನಾ ಕ್ರಮಕ್ಕೆ ಒತ್ತು ನೀಡಲು ಅಗತ್ಯ ಪಠ್ಯಕ್ರಮ ಮಾರ್ಪಾಡುಗಳು ಹಾಗೂ ತಾರ್ಕಿಕ ಆಧಾರ.

- ಪೋಷಕರು ಅಥವಾ ಭಾಗೀದಾರರು ಮತ್ತು ಶಿಕ್ಷಕರಿಗೆ ಅಗತ್ಯವಾದ ಬೆಂಬಲ, ಮೇಲುಸ್ತುವಾರಿ ಮತ್ತು ಆಪ್ತ ಸಲಹೆ ಮತ್ತು ಎಲ್ಲಾ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಸೇವಾ ನಿಬಂಧನೆಗಳಿಗೆ ಸಂಬಂಧಿಸಿದ ಅಗತ್ಯವಾದ ವ್ಯವಸ್ಥೆಯಲ್ಲಿ ಸುಧಾರಣೆಗಳು ಮತ್ತು ತನ್ಮೂಲಕ ಪಠ್ಯಕ್ರಮ ಚೌಕಟ್ಟಿನ ಯಶಸ್ವಿ ಅನುಷ್ಠಾನ ಹಾಗೂ ಅದರ ಗುರಿ-ಉದ್ದೇಶಗಳನ್ನು ಸಾಧಿಸುವುದು.

- 3 ರಿಂದ 8 ವಯೋಮಾನದ ಮಕ್ಕಳಿಗೆ ಸಂಬಂಧಿಸಿದಂತೆ ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಾದ ಗಮನ, ಸಮಯ ಮತ್ತು ಸಂಪನ್ಮೂಲಗಳನ್ನು ಉದ್ದೇಶಿತ ಪ್ರಸ್ತಾಪಿಸಲ್ಪಟ್ಟ ಸುಧಾರಣಾ ಕ್ರಮಗಳನ್ನು ಹೊಂದುವುದನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಾದ ಮೂಲಭೂತ ತತ್ವಗಳು ಅಥವಾ ಮಾರ್ಗದರ್ಶಿ ಸೂತ್ರಗಳು.

ಈ ಪಠ್ಯಕ್ರಮ ಚೌಕಟ್ಟು ದಾಖಲೆಯು ಕನ್ನಡ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಲಭ್ಯವಿದೆ. ರಾಜ್ಯದಲ್ಲಿ ಪೂರ್ವಬಾಲ್ಯ ಶಿಕ್ಷಣ ಮತ್ತು ಆರೈಕೆ ವ್ಯವಸ್ಥೆಯನ್ನು ಸುಧಾರಿಸಲು ರಚಿತವಾದ ಆರು ತಂಡಗಳ ಪೈಕಿ ಒಂದು ತಂಡದ ವರದಿ ಇದಾಗಿರುತ್ತದೆ. ಇತರೆ ತಂಡಗಳ ವರದಿಯನ್ನು ಸದ್ಯದಲ್ಲಿ ಬಿಡುಗಡೆ ಮಾಡಲಾಗುವುದು. ಬುನಾದಿ ಹಂತದ ರಾಜ್ಯ ಪಠ್ಯಕ್ರಮ ಚೌಕಟ್ಟಿನ ಯಶಸ್ವಿ ಅನುಷ್ಠಾನವು ಸಮಗ್ರ ಬೆಳವಣಿಗೆ ಮತ್ತು ಕಲಿಕೆಗೆ ಅತ್ಯಂತ ಮಹತ್ವದ ಹಂತವಾದ ಬುನಾದಿ ಹಂತದ 3 ರಿಂದ 8 ವಯೋಮಾನದ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಶಾಲೆಯನ್ನು ಒದಗಿಸುವುದನ್ನು ಖಾತ್ರಿಪಡಿಸಲು ನೆರವಾಗುತ್ತದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪಕ್ರಮಗಳಾದ "ವಿವೇಕ" ತರಗತಿ ಕೋಣೆಗಳ ನಿರ್ಮಾಣ, 15 ಸಾವಿರ ಶಿಕ್ಷಕರ ನೇಮಕಾತಿ, ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪಕ್ರಮಗಳಾದ ಅಂಗನವಾಡಿ ಕಾರ್ಯಕರ್ತರನ್ನು ಅಂಗನವಾಡಿ ಶಿಕ್ಷಕರೆಂದು ಮರು ಪದನಾಮೀಕರಣಗೊಳಿಸುವುದು, ಹೊಸದಾಗಿ ನೇಮಕವಾಗುವ ಅಂಗನವಾಡಿ ಕಾರ್ಯಕರ್ತೆಯರಿಗೆ ನೂತನ ಅರ್ಹತಾ ನಿಯಮಗಳ ಅನುಷ್ಠಾನ, 3 ಸಾವಿರಕ್ಕೂ ಅಧಿಕ ಹೊಸ ಅಂಗನವಾಡಿಗಳ ಪ್ರಾರಂಭ ಇತ್ಯಾದಿಗಳು ರಾಜ್ಯದ ಮಕ್ಕಳ ಭವ್ಯ ಭವಿಷ್ಯದ ನಿರ್ಮಾಣಕ್ಕೆ ಅನುಕೂಲ ಕಲ್ಪಿಸುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ: ವಿವರವಾದ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ABOUT THE AUTHOR

...view details