ಬೆಂಗಳೂರು: ಕೊರೊನಾ ಸೋಂಕು ಕರುನಾಡಿಗೆ ಕಾಲಿಡುವ ಮುನ್ನವೇ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿದ ಮೊದಲ ರಾಜ್ಯ ಅಂದರೆ ಅದು ಕರ್ನಾಟಕ. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುವ ಮುನ್ನ ಕೊರೊನಾ ಕಾರ್ಯಾಚರಣೆಗೆ 200 ಕೋಟಿ ಮೀಸಲು ಇಟ್ಟಿದ್ದು ನಮ್ಮ ರಾಜ್ಯ ಎಂಬುದು ಗಮನಾರ್ಹ.
ಕೊರೊನಾ ಕಾಲಿಡುವ ಮುನ್ನ ರಾಜ್ಯದಲ್ಲಿ ಸಾರ್ವಜನಿಕ ಸ್ಥಳ ಬಂದ್ ಆಗಿತ್ತು ಅಷ್ಟೇ ಅಲ್ಲ ಕೊರೊನಾ ಪೀಡಿತರಿಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಿದ್ದು, ಜನಸಾಮಾನ್ಯರ ಸಹಾಯಕ್ಕೆ ಸಹಾಯವಾಣಿ, ಮೊಬೈಲ್ ಆ್ಯಪ್ ರೂಪಿಸಿದ ರಾಜ್ಯ ಅಂದರೆ ಅದು ಕರ್ನಾಟಕ. ಆದರೂ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ.
ಈ ಪೈಕಿ 14 ಸೋಂಕಿತರು ಬಲಿಯಾಗಿದ್ದು, 104 ಜನರು ಗುಣಮುಖರಾಗಿ ಮನೆಗಳಿಗೆ ವಾಪಸಾಗಿದ್ದಾರೆ. ಸದ್ಯ 266 ಕೊರೊನಾ ಸೋಂಕಿತರ ವಿರುದ್ಧ ಹೋರಾಡುತ್ತಿದ್ದಾರೆ. ನಿಗದಿತ ಆಸ್ಪತ್ರೆಗಳಲ್ಲಿ ಈವರೆಗೆ 791 ಶಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ಇನ್ನು ಇಂತಹ ಶಂಕಿತರ ಸಂಖ್ಯೆ ನಿತ್ಯವೂ ನೂರಾರ ಗಡಿ ದಾಟುತ್ತಿದೆ. ಹೋಂ ಕ್ವಾರಂಟೈನ್ ಎನ್ಫೋರ್ಸ್ಮೆಂಟ್ ಸ್ಕ್ವಾಡ್(HQES) ತಂಡದವರು, ಸಾರ್ವಜನಿಕರಿಂದ ಪಡೆದ ದೂರುಗಳ ಮೇರೆಗೆ ಇದುವರೆಗೂ 559 ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್‍ನಿಂದ ನಿಗದಿತ ಸಂಸ್ಥೆಗಳಲ್ಲಿ ಕ್ವಾರಂಟೈನ್‍ಗೆ ವರ್ಗಾವಣೆ ಮಾಡಲಾಗಿದೆ.
ಇಷ್ಟೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಮತ್ತೊಂದು ಕಡೆ ಶಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಮೊದಲು ಸೋಂಕಿತರ ಪ್ರಥಮ ಸಂಪರ್ಕ ಹೊಂದಿದವರ ಮೇಲೆ ನಿಗಾ ವಹಿಸಲಾಗುತ್ತಿತ್ತು. ಇನ್ನು ದ್ವಿತೀಯ ಸಂಪರ್ಕ ಹೊಂದಿದ, ಕೊರೊನಾ ರೋಗದ ಲಕ್ಷಣಗಳು ಕಂಡು ಬಂದವರಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಇಂದು ಒಂದೇ ದಿನ 121 ಶಂಕಿತರನ್ನು ಗುರುತಿಸಲಾಗಿದ್ದು, ನಿಗದಿತ ಸ್ಥಳದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ.