ನವದೆಹಲಿ:ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ 2023ರ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿದರು. ವಿಧಾನಸಭೆಯ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.
ಚುನಾವಣೆ ವೇಳಾಪಟ್ಟಿ ಹೀಗಿದೆ:
ಅಧಿಸೂಚನೆ ಪ್ರಕಟ-ಏಪ್ರಿಲ್ 13
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಏಪ್ರಿಲ್ 20
ನಾಮಪತ್ರ ಪರಿಶೀಲನೆ- ಏಪ್ರಿಲ್ 21
ನಾಮಪತ್ರ ವಾಪಸ್ಗೆ ಕೊನೆಯ ದಿನ- ಏಪ್ರಿಲ್ 24
ಮತದಾನದ ದಿನಾಂಕ- ಮೇ 10
ಫಲಿತಾಂಶ ಪ್ರಕಟ- ಮೇ 13
"ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ 5 ಕೋಟಿ 21 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ ಪುರುಷರು 2 ಕೋಟಿ 62 ಲಕ್ಷ ಇದ್ದರೆ, 2 ಕೋಟಿ 59 ಲಕ್ಷ ಮಹಿಳಾ ಮತದಾರರು ಇದ್ದಾರೆ. ಮೊದಲ ಬಾರಿಗೆ 80 ವರ್ಷ ವಯಸ್ಸಿನ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ" ಎಂದು ಚುನಾವಣಾ ಆಯುಕ್ತರು ತಿಳಿಸಿದರು.
"ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಜಾಗೃತಿ ಅಭಿಯಾನದ ಅಂಗವಾಗಿ ಹಲವಾರು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಳೆದ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಕಡಿಮೆ ಮತದಾನವಾಗಿತ್ತು. ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಹಲವಾರು ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಭ್ಯರ್ಥಿಗಳ ಪೂರ್ಣ ಮಾಹಿತಿಯುಳ್ಳ ಪ್ರಮಾಣಪತ್ರ ವೆಬ್ಸೈಟ್ನಲ್ಲಿ ಲಭ್ಯವಿರಲಿದೆ" ಎಂದು ರಾಜೀವ್ ಕುಮಾರ್ ತಿಳಿಸಿದರು. ಇದೇ ವೇಳೆ, "ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ ನೀಡಲು ಸಂಗ್ರಹಿಸಲಾಗಿದ್ದ ವಸ್ತುಗಳು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ, ಮದ್ಯವನ್ನು ವಶಕ್ಕೆ ಪಡೆಯಲಾಗಿದೆ" ಎಂದರು.
ಸುಗಮ ಮತದಾನಕ್ಕಾಗಿ ರಾಜ್ಯದಲ್ಲಿ 58,282 ಒಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ ನಗರ ಭಾಗದಲ್ಲಿ 24,063 ಮತಗಟ್ಟೆ, ಗ್ರಾಮೀಣ ಭಾಗದಲ್ಲಿ 34,219 ಮತಗಟ್ಟೆಗಳಿರಲಿವೆ. 1,320 ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆ, 226 ಯುವಕರು ನಿರ್ವಹಿಸುವ ಮತಗಟ್ಟೆ, 12,000 ಸೂಕ್ಷ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಚುನಾವಣಾ ಅಕ್ರಮ ತಡೆಗೆ 2400 ವಿಶೇಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 2400 ವೀಕ್ಷಕರು, 2016 ಫ್ಲೈಯಿಂಗ್ಸ್ ಸ್ವ್ಕಾಡ್ ಸದಸ್ಯರು, 224 ಮತಗಟ್ಟೆಯಲ್ಲಿ ತಲಾ 1 ಯುವ ಮತಗಟ್ಟೆ, 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.