ಕರ್ನಾಟಕ

karnataka

ETV Bharat / state

ಚೈತ್ರಾ ಕುಂದಾಪುರ ಬಂಧನ ಪ್ರಕರಣ: 'ಬಿಜೆಪಿ ಟಿಕೆಟ್​ ಮಾರಾಟವಾಗಿವೆಯೇ' ಎಂದು ಪ್ರಶ್ನಿಸಿ ಕಾಂಗ್ರೆಸ್​ ವಾಗ್ದಾಳಿ - Chaitra kundapur arrest case

Karnataka Congress Allegations on BJP: ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣ ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ತನ್ನ​ ಎಕ್ಸ್​ ಖಾತೆಯಲ್ಲಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.

Karnataka congress slams BJP on Chaitra kundapur arrest case
ಚೈತ್ರಾ ಕುಂದಾಪುರ ಬಂಧನ ಪ್ರಕರಣ: ಈ ಹಿಂದಿನ ಬಿಜೆಪಿ ಸರ್ಕಾರ ಉಲ್ಲೇಖಿಸಿ ಕಾಂಗ್ರೆಸ್​ ವಾಗ್ದಾಳಿ

By ETV Bharat Karnataka Team

Published : Sep 13, 2023, 5:16 PM IST

Updated : Sep 13, 2023, 5:22 PM IST

ಬೆಂಗಳೂರು:ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದ ಮೇಲೆ ಹಿಂದೂಪರ ಹಾಗೂ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನದ ಕುರಿತಂತೆ ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ತನ್ನ​ ಎಕ್ಸ್​ ಖಾತೆಯಲ್ಲಿ ವಾಗ್ದಾಳಿ ನಡೆಸಿದೆ. ''ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್​​ಗಳೂ ಮಾರಾಟವಾಗಿದೆಯೇ?'' ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಈ ಕುರಿತಂತೆ ಕರ್ನಾಟಕ ಕಾಂಗ್ರೆಸ್​ ಎಕ್ಸ್ (ಈ ಹಿಂದಿನ ಟ್ವಿಟರ್​)​ ಖಾತೆಯಲ್ಲಿ ಟೀಕಿಸಲಾಗಿದ್ದು, ''ಭಾಷಣಕಾರ್ತಿಯು ಬಿಜೆಪಿಯ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಸುಮಾರು 7 ಕೋಟಿ ಪಡೆದು ವಂಚಿಸಿದ್ದಾರೆ ಎಂದು ಕುಂದಾಪುರದ ಉದ್ಯಮಿಯೊಬ್ಬರು ದೂರಿದ್ದಾರೆ. ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್​​ಗಳೂ ಮಾರಾಟವಾಗಿದೆಯೇ? ಈ ವಂಚನೆ ಪ್ರಕರಣ ಹಲವು ತಿಂಗಳ ಹಿಂದೆಯೇ ಬೆಳಕಿಗೆ ಬಂದಿದ್ದರೂ ಬಿಜೆಪಿ ಪಕ್ಷ ದೂರು ಕೊಡದೇ ಸುಮ್ಮನಿರುವುದೇಕೆ? ಈ 7 ಕೋಟಿ ವಂಚನೆಯಲ್ಲಿ ಬಿಜೆಪಿಗರ ಪಾಲೆಷ್ಟು? RSS ನ ಪಾಲೆಷ್ಟು? ಈ ಮಹಾ ವಂಚನೆಯ ಬಗ್ಗೆ ಕರ್ನಾಟಕ ಬಿಜೆಪಿ ಮೌನವಹಿಸಿರುವುದೇಕೆ?'' ಎಂದು ಪ್ರಶ್ನೆ ಮಾಡಿದೆ.

''ಬಿಜೆಪಿ ಹಾಗೂ ಅದರ ಬಾಡಿಗೆ ಭಾಷಣಕಾರರ ಅಸಲಿ ಬಂಡವಾಳ ಬಯಲಾಗುತ್ತಿದೆ. ಹಿಂದುತ್ವದ ಹೆಸರಲ್ಲಿ ಹಿಂದುಗಳನ್ನೇ ವಂಚಿಸುವುದು ಬಿಜೆಪಿ ಹಾಗೂ ಅದರ ಪರಿವಾರದ ಹಳೇ ಚಾಳಿ. ವಂಚನೆ ಪ್ರಕರಣದಲ್ಲಿ ಬಂಧನವಾದ ಚೈನ್ ಚೈತ್ರ ಎಂಬಾಕೆಯ ಪ್ರಕರಣದಲ್ಲಿ ಬಿಜೆಪಿ ಮೌನವಹಿಸಿದೆ. "ಟಿಕೆಟ್ ಮಾರಾಟ" ಬೆಳಕಿಗೆ ಬಂದಿರುವಾಗ ಬಿಜೆಪಿಯ ಸ್ಪಷ್ಟನೆ ಏನಿರಬಹುದು? ಆಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಿದ್ದ ವರಸೆ ಪ್ರದರ್ಶಿಸಬಹುದೇ? "ಆಕೆ ಬಿಜೆಪಿಯ ಸದಸ್ಯೆ ಅಲ್ಲ" ಎಂದು ಹೇಳಿಕೆ ಹೊರಡಿಸಬಹುದೇ?'' ಎಂದು ಕಾಂಗ್ರೆಸ್​​ ಟೀಕಿಸಿದೆ.

''ಬಿಜೆಪಿ ಪ್ರಾಮಾಣಿಕವಾಗಿದ್ದರೆ ಪಕ್ಷದ ಹೆಸರಲ್ಲಿ ವಂಚಿಸಿದ ಆಕೆಯ ವಿರುದ್ದ ಈ ಹಿಂದೆಯೇ ದೂರು ನೀಡಲಿಲ್ಲ ಏಕೆ? ಬಿಜೆಪಿ ತನ್ನ ಆಡಳಿತದಲ್ಲಿ ಕುಮಾರಕೃಪಾ ಅತಿಥಿಗೃಹವನ್ನು ಭ್ರಷ್ಟರು, ಲಂಪಟರು, ದಗಾಕೋರರ ಅಡ್ಡೆಯಾಗಿ ಬದಲಾಯಿಸಿತ್ತೇ? ಸ್ಯಾಂಟ್ರೋ ರವಿಯೂ ವಂಚನೆಯ ಕೆಲಸಗಳಿಗೆ ಕುಮಾರಕೃಪಾವನ್ನೇ ಕಾಯಂ ಕಾರ್ಯಸ್ಥಾನ ಮಾಡಿಕೊಂಡಿದ್ದ, ಚೈತ್ರ ಕೂಡ ಟಿಕೆಟ್ ವಂಚನೆಗೆ ಕುಮಾರಕೃಪಾವನ್ನೇ ಆಶ್ರಯಿಸಿದ್ದಳು. ಕುಮಾರಕೃಪಾ ಅತಿಥಿಗೃಹವನ್ನು ಥರ್ಡ್ ಗ್ರೇಡ್ ಲಾಡ್ಜ್ ನಂತೆ ವ್ಯವಸ್ಥೆ ಮಾಡಿಕೊಡುವುದರ ಹಿಂದೆ ಯಾರ ಕೃಪೆ ಇತ್ತು, ಬಿಜೆಪಿ'' ಎಂದು ಪ್ರಶ್ನಿಸಿದೆ.

''ಹಿಂದೆ ಗೃಹಮಂತ್ರಿಯಾಗಿದ್ದಾಗ ಪಿಎಸ್​ಐ ಹಗರಣದ ಪ್ರಮುಖ ಆರೋಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮಾಜಿ ಗೃಹ ಸಚಿವರು ಈಗ ವಂಚನೆ ಆರೋಪಿಯ ರಕ್ಷಣೆಗೆ ಬ್ಯಾಟ್ ಬೀಸುತ್ತಿದ್ದಾರೆ. ಆರಗ ಜ್ಞಾನೇಂದ್ರ ಅವರೇ, ಆಕೆ ವಂಚಿಸಿದ್ದು ನಿಮ್ಮದೇ ಪಕ್ಷದಲ್ಲಿರುವ ಹಿಂದೂಪರ ಉದ್ಯಮಿಗೆ, ಆಕೆಯ ವಿರುದ್ದ ದೂರು ನೀಡಿದ್ದು ಅದೇ ನಿಮ್ಮದೇ ಪಕ್ಷದ ಮುಖಂಡ, ಆದರೂ ಆಕೆಯ ಪರ ನಿಂತಿದ್ದೀರಿ ಅಂದರೆ 7 ಕೋಟಿಯಲ್ಲಿ ನಿಮಗೂ ಪಾಲಿದೆಯೇ? ಬಿಜೆಪಿ ಅಂದರೆ ಭ್ರಷ್ಟರು, ವಂಚಕರಿಗೆ ಬಲು ಪ್ರೀತಿ ಏಕೆ?'' ಎಂದಿದೆ.

''ಮಾಜಿ ಗೃಹಸಚಿವರು ಆರೋಪಿಯ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ? ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ ಆರಗ ಜ್ಞಾನೇಂದ್ರ ಅವರೇ'. ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರ ಜ್ಞಾನೇಂದ್ರರಿಗೆ ಪರಮಾಪ್ತರು. ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ ಕೃಪೆ ಇತ್ತೇ? ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ?'' ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

''ಬಿಜೆಪಿ ಪಕ್ಷದಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಟಿಕೆಟ್ ವಂಚನೆಯ ಪ್ರಕರಣದಲ್ಲಿ ಬಿಜೆಪಿಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಪ್ರಮುಖ ಆರೋಪಿ. ಈತನ ವಂಚನೆಯ ಬಗ್ಗೆ ಒಂದು ತಿಂಗಳ ಹಿಂದೆಯೇ ಪಕ್ಷಕ್ಕೆ ದೂರು ಬಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಏಕೆ ಬಿಜೆಪಿ? ವಂಚಕರಿಗೆ, ಭ್ರಷ್ಟರಿಗೆ ಬಿಜೆಪಿ ತವರು ಮನೆಯಾಗಿದೆಯೇ? ಬಿಜೆಪಿಯಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 - 80 ಕೋಟಿ, MLA ಟಿಕೆಟ್ ಗೆ 7 ಕೋಟಿ!! ಇದೆಲ್ಲವೂ ಬಿಜೆಪಿಯವರಿಂದಲೇ ಬಯಲಾದ ಸತ್ಯಗಳು. ಯತ್ನಾಳ್ ಆಣೆಗೂ ಇದನ್ನು ನಾವು ಹೇಳಿದ್ದಲ್ಲ! ಈ ಮಾರಾಟದ ಆಟದಲ್ಲಿ “ವಿರೋಧ ಪಕ್ಷದ ನಾಯಕ”ನ ಹುದ್ದೆಗೆ ಇನ್ನೂ ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲವೇ ಬಿಜೆಪಿ? ಎಂದು ಟೀಕಿಸಿದೆ.

ಉದ್ಯಮಿಯೊಬ್ಬರಿಗೆ ವಂಚನೆ ಆರೋಪದ ಮೇಲೆ ಚೈತ್ರಾ ಕುಂದಾಪುರ ಸೇರಿ 6 ಮಂದಿ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌. ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್ (ವಿಶ್ವನಾಥ್ ಪಾತ್ರಧಾರಿ), ಧನರಾಜ್, ಶ್ರೀಕಾಂತ್ ಹಾಗೂ ಪ್ರಜ್ವಲ್ ಇನ್ನುಳಿದ ಬಂಧಿತರು. ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ:ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೇರಿ 6 ಆರೋಪಿಗಳ ಬಂಧನ

Last Updated : Sep 13, 2023, 5:22 PM IST

ABOUT THE AUTHOR

...view details