ಬೆಂಗಳೂರು: "ಅಖಂಡ ಕರ್ನಾಟಕದ ಮಹಾ ಜನತೆಗೆ ನನ್ನ ಸಾಷ್ಟಾಂಗ ನಮಸ್ಕಾರ. ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದಗಳು. ಈ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ನನ್ನ ನಮಸ್ಕಾರ. ನನ್ನನ್ನು ಬಿಜೆಪಿ ನಾಯಕರು ಜೈಲಿಗೆ ತಳ್ಳಿದರು. ನಾನು ಜೈಲಿನಲ್ಲಿದ್ದಾಗ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು" ಎಂದು ಹೇಳಿದರು.
ಕನಕಪುರದಲ್ಲಿ ಡಿಕೆಶಿಗೆ 8ನೇ ಗೆಲುವು: ಕನಕಪುರ ಕ್ಷೇತ್ರದಿಂದ ಡಿಕೆಶಿ 8ನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಡಿಕೆಶಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ಸಂಕ್ಷಿಪ್ತ ರಾಜಕೀಯ ಹಿನ್ನೆಲೆ: ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಜನ ನಾಯಕ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿರುವ ಇವರು, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಹೌದು. ಕಾಂಗ್ರೆಸ್ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಮುಖ್ಯಮಂತ್ರಿಯಾಗುವ ಪಟ್ಟಿಯಲ್ಲಿ ಮೊದಲಿಗರು.
ಡಿಕೆಶಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಆಪ್ತರೂ ಆಗಿದ್ದಾರೆ. ದೇಶದ ಶ್ರೀಮಂತ ರಾಜಕಾರಣಿಗಳಲ್ಲಿಯೂ ಒಬ್ಬರು. 2018ರ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅವರು ಒಟ್ಟು 840 ಕೋಟಿ ರೂ ಮೌಲ್ಯದ ಆಸ್ತಿ ಘೋಷಿಸಿದ್ದರು. ಪ್ರಸ್ತುತ 1 ಸಾವಿರದ 400 ಕೋಟಿಗೂ ಅಧಿಕ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕನಕಪುರದಲ್ಲಿ ಡಿಕೆಶಿಗೆ 8ನೇ ಗೆಲುವು: ಆರ್.ಅಶೋಕ್ ವಿರುದ್ಧ 50ಕ್ಕೂ ಹೆಚ್ಚು ಮತಗಳಿಂದ ಜಯಭೇರಿ!