ನವದೆಹಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸತ್ಗೆ ಆಗಮಿಸಿ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ಹೈಕಮಾಂಡ್ ಬುಲಾವ್ ಮೇರೆಗೆ ದಿಲ್ಲಿಯಲ್ಲಿರುವ ಸಿಎಂ ರಾಜ್ಯಕ್ಕೆ ಬರಬೇಕಿರುವ ಅನುದಾನ ಬಗ್ಗೆ ಚರ್ಚಿಸಲು ಮೋದಿ ಅವರ ಭೇಟಿಗೆ ಅವಕಾಶ ಕೋರಿದ್ದರು. ಹೀಗಾಗಿ ಇಂದು ಬೆಳಗ್ಗೆ ಮೋದಿ ಅವರ ಭೇಟಿಗೆ ಸಮಯ ಸಿಕ್ಕಿದ್ದು, ಸಂಸತ್ತಿನಲ್ಲಿನ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಸಭೆ ಬಳಿಕ ಟ್ವೀಟ್ ಮಾಡಿರುವ ಸಿಎಂ ಕಚೇರಿ, ಈ ಸಭೆಯು ಸೌಹಾರ್ದಯುತವಾಗಿತ್ತು ಎಂದು ತಿಳಿಸಿದೆ.
ಸಿದ್ದರಾಮಯ್ಯ ಅವರು ಪ್ರಧಾನಿಗೆ ಶ್ರೀಗಂಧದ ಮರದಿಂದ ಮಾಡಿದ ಮಾಲೆ ಮತ್ತು ಕಲಾಕೃತಿಯ ಜೊತೆಗೆ ಸಾಂಪ್ರದಾಯಿಕ ಮೈಸೂರು ಪೇಟಾ (ಶಿರಸ್ತ್ರಾಣ) ವನ್ನು ನೀಡಿ ಗೌರಿವಿಸಿದರು. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜಾರಿಗೊಳಿಸಿದ ಉಚಿತ ಖಾತರಿ ಯೋಜನೆಗಳ ಕುರಿತು ಮೋದಿಯವರು ಇತ್ತೀಚೆಗಷ್ಟೇ ಟೀಕಿಸಿದ್ದರು. ಈ ಟೀಕೆ ಬಗ್ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ ಒಂದು ದಿನದ ಬಳಿಕ ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿತ್ತು.
ಅನುದಾನ ಬಿಡುಗಡೆಗೆ ಮನವಿ:ವಿವಿಧ ಯೋಜನೆಗಳಡಿ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾಗಿರುವ ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಪ್ರಧಾನಿ ಬಳಿ ಸಿಎಂ ಸಿದ್ದರಾಮಯ್ಯ ಚರ್ಚಿಸಿದರು ಎಂದು ತಿಳಿದು ಬಂದಿದೆ. ಎರಡನೇ ಅವಧಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಭೇಟಿಯಾಗಿರುವುದು ವಿಶೇಷ.
ಮೂಲಗಳ ಪ್ರಕಾರ, ಕರ್ನಾಟಕ ಸರ್ಕಾರವು ಬಿಪಿಎಲ್ ಕುಟುಂಬದ ಎಲ್ಲ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಅಭಾಗ್ಯಕ್ಕಾಗಿ ಕೇಂದ್ರೀಯ ಸಂಸ್ಥೆಗಳಿಂದ ಅಕ್ಕಿ ಪೂರೈಸುವಂತೆ ಮೋದಿ ಅವರಿಗೆ ಮನವಿ ಮಾಡಿರುವ ಸಾಧ್ಯತೆ ಇದೆ. ಇದಲ್ಲದೇ, ನೀರಾವರಿ ಯೋಜನೆಗಳು, ಜಲ ಜೀವನ್ ಮಿಷನ್, ಎಂಜಿಎನ್‌ಆರ್‌ಇಜಿಎ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ನೀಡುವಂತೆ ಮನವಿ ಮಾಡಿಕೊಂಡರು ಎನ್ನಲಾಗಿದೆ.