ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಎಲ್ಲ 34 ಜನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಸಿದ್ದರಾಮಯ್ಯ ನಿರೀಕ್ಷೆಯಂತೆ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ ಇಲಾಖೆಗಳನ್ನು ನೀಡಲಾಗಿದೆ.
ರಾಮಲಿಂಗಾರೆಡ್ಡಿಗೆ ಸಾರಿಗೆ ಇಲಾಖೆ: ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಬೇಡಿಕೆ ಇಟ್ಟಿದ್ದರೂ ಸಹ ಅಂತಿಮವಾಗಿ ಅದನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗಿದೆ. ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ ನೀಡುವುದಕ್ಕೆ ಅಪಸ್ವರವೆತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಜೊತೆ ಭಾನುವಾರ ಮಾತನಾಡಿ ಮನವೊಲಿಸಿ ಅವರಿಗೆ ಸಾರಿಗೆ ಇಲಾಖೆ ಖಾತೆ ನೀಡಿದ್ದಾರೆ.
ಗೃಹ ಇಲಾಖೆ ನೀಡುವ ಪ್ರಸ್ತಾಪಕ್ಕೆ ಮತ್ತೊಬ್ಬ ಹಿರಿಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಖಾತೆ ಬದಲಾವಣೆ ಮಾಡದೆ ಗೃಹ ಇಲಾಖೆಯನ್ನೇ ಅವರಿಗೆ ನೀಡಲಾಗಿದೆ. 2013 ರಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪರಮೇಶ್ವರ್ ಅವರಿಗೆ ಗೃಹ ಇಲಾಖೆ ನೀಡಲಾಗಿತ್ತು. ಈ ಬಾರಿಯೂ ಅವರಿಗೆ ಅದೇ ಇಲಾಖೆ ದೊರೆತಿದೆ.
ಡಾ.ಹೆಚ್.ಸಿ.ಮಹದೇವಪ್ಪಗೆ ಸಮಾಜ ಕಲ್ಯಾಣ:2013 ರಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಹಲವರಿಗೆ ಇದ್ದ ಖಾತೆಗಳು ಈ ಬಾರಿಯ ಸಿದ್ದರಾಮಯ್ಯ ಸಂಪುಟದಲ್ಲಿ ಲಭ್ಯವಾಗಿಲ್ಲ. ಸಿದ್ದರಾಮಯ್ಯ ಪರಮಾಪ್ತರಾದ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಈ ಹಿಂದೆ ಲೋಕೋಪಯೋಗಿ ಖಾತೆಯನ್ನು ನೀಡಲಾಗಿತ್ತು. ಈ ಬಾರಿ ಸಮಾಜ ಕಲ್ಯಾಣ ಇಲಾಖೆ ನೀಡಲಾಗಿದೆ.
ಹಿರಿಯ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಜಲ ಸಂಪನ್ಮೂಲ ಖಾತೆಯನ್ನು ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಲಾಗಿತ್ತು. ಈ ಬಾರಿ ಅವರಿಗೆ ಬೃಹತ್ ಕೈಗಾರಿಕೆ ಇಲಾಖೆ ಹಂಚಿಕೆ ಮಾಡಲಾಗಿದೆ. ಅದರಂತೆ ಕೆ.ಜೆ.ಜಾರ್ಜ್ ಅವರಿಗೆ ಈ ಮೊದಲು ಗೃಹ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಕೊಡಲಾಗಿತ್ತು. ಈ ಸಾರಿ ಇಂಧನ ಇಲಾಖೆ ನೀಡಲಾಗಿದೆ. ಕೃಷ್ಣ ಬೈರೇಗೌಡ ಅವರಿಗೆ ಈ ಹಿಂದೆ ಕಾನೂನು ಮತ್ತು ಸಂಸದೀಯ ಇಲಾಖೆ ನೀಡಲಾಗಿತ್ತು. ಈ ಸಲ ಅವರಿಗೆ ಕಂದಾಯ ಇಲಾಖೆಯಂತಹ ಮಹತ್ವದ ಇಲಾಖೆ ದೊರೆತಿದೆ. ಖಾತೆ ಹಂಚಿಕೆಯ ಸಂಪೂರ್ಣ ವಿವರ ಹೀಗಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯ - ಹಣಕಾಸು, ಆಡಳಿತ ಸುಧಾರಣೆ , ಗುಪ್ತಚರ, ವಾರ್ತಾ ಇಲಾಖೆ, ಐಟಿ ಬಿಟಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಹಾಗು ಹಂಚಿಕೆ ಮಾಡದಿರುವ ಇತರೆ ಖಾತೆಗಳು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ - ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ( ಬಿಡಿಎ, ಬಿಬಿಎಂಪಿ, ಜಲಮಂಡಳಿ, ಬಿಎಂಆರ್ಡಿಎ, ಬಿಎಂಆರ್ಸಿಎಲ್ ಇತ್ಯಾದಿ)
ಡಾ.ಜಿ.ಪರಮೇಶ್ವರ - ಗೃಹ
ಹೆಚ್.ಕೆ.ಪಾಟೀಲ್- ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗು ಪ್ರವಾಸೋದ್ಯಮ
ಕೆ.ಹೆಚ್.ಮುನಿಯಪ್ಪ - ಆಹಾರ ಮತ್ತು ನಾಗರೀಕ ಪೂರೈಕೆ , ಗ್ರಾಹಕ ಸೇವೆ
ರಾಮಲಿಂಗಾರೆಡ್ಡಿ - ಸಾರಿಗೆ
ಎಂ.ಬಿ.ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಕೆ.ಜೆ.ಜಾರ್ಜ್ - ಇಂಧನ
ದಿನೇಶ್ ಗುಂಡೂರಾವ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಡಾ.ಹೆಚ್.ಸಿ.ಮಹದೇವಪ್ಪ - ಸಮಾಜ ಕಲ್ಯಾಣ
ಸತೀಶ್ ಜಾರಕಿಹೊಳಿ - ಲೋಕೋಪಯೋಗಿ
ಕೃಷ್ಣ ಭೈರೇಗೌಡ - ಕಂದಾಯ
ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಶಿವಾನಂದ ಪಾಟೀಲ್ - ಜವಳಿ , ಸಕ್ಕರೆ ಹಾಗು ಕೃಷಿ ಮಾರುಕಟ್ಟೆ
ಜಮೀರ್ ಅಹ್ಮದ್ - ವಸತಿ , ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ