ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ 24 ಸಚಿವರು ಸೇರ್ಪಡೆಯಾಗಿದ್ದಾರೆ. ಶಾಸಕರಲ್ಲದವರು ಸೇರಿದಂತೆ ಹೊಸಬರು ಸಚಿವರಾಗಿ ಬಡ್ತಿ ಪಡೆದಿದ್ದಾರೆ. ಜಾತಿ ಹಾಗೂ ಜಿಲ್ಲಾವಾರು ಆಧಾರದ ಮೇರೆಗೆ ಕೆಲ ಹಿರಿಯ ಶಾಸಕರಿಗೆ ಕೊಕ್ ಕೊಟ್ಟು ಹೊಸಬರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ.
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್, ರಾಯಚೂರಿನ ಎನ್.ಎಸ್.ಬೋಸರಾಜು, ಸೊರಬ ಕ್ಷೇತ್ರದ ಮಧು ಬಂಗಾರಪ್ಪ, ಚಿಂತಾಮಣಿ ಕ್ಷೇತ್ರದ ಎಂ.ಸಿ.ಸುಧಾಕರ್, ಬಳ್ಳಾರಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಸೇರಿದಂತೆ ಇನ್ನಿತರರು ಸಚಿವರಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಬೋಸರಾಜು: ಅಚ್ಚರಿ ಎಂಬಂತೆ ಹಾಲಿ ಶಾಸಕ, ವಿಧಾನ ಪರಿಷತ್ ಸದಸ್ಯರಾಗದಿದ್ದರೂ ಎನ್ಎಸ್ ಬೋಸರಾಜು ಸಚಿವ ಪಡೆದಿದ್ದಾರೆ. ಈ ಹಿಂದೆ ವಿಧಾನಸಭೆ, ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆದರೆ, ಈ ಬಾರಿ ಪೈಪೋಟಿ ನಡುವೆಯೂ ಮಂತ್ರಿಗಿರಿ ಒಲಿದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ, ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿರುವ ಬೋಸರಾಜು 1972-76ರಲ್ಲಿ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 1985ರಲ್ಲಿ ಮಾನ್ವಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ 3700 ಮತಗಳಿಂದ ಸೋತಿದ್ದರು. ಆದರೆ, 1999 ಮತ್ತು 2004ರಲ್ಲಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 2014ರಲ್ಲಿ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ:ಮೂರನೇ ಬಾರಿಯೂ ಅಜಯ್ ಸಿಂಗ್ಗೆ ತಪ್ಪಿದ ಸಚಿವ ಸ್ಥಾನ
ಮಧು ಬಂಗಾರಪ್ಪ: ಸಿನಿ ಹಾಗೂ ರಾಜಕೀಯ ಕುಡಿ ಎಂಬ ಕಾರಣಕ್ಕೆ ಮಧು ಬಂಗಾರಪ್ಪ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. 2013ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಹೋದರ ಕುಮಾರ್ ಬಂಗಾರಪ್ಪ ಎದುರಾಳಿಯಾಗಿದ್ದರು. 2018ರ ಚುನಾವಣೆಯಲ್ಲಿ ಸೊರಬದ ರಾಜಕೀಯ ಚಿತ್ರಣ ಬದಲಾಯಿತು. ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 72,091 ಮತಗಳನ್ನು ಪಡೆದು ಜಯಗಳಿಸಿದರು. ಬಳಿಕ 2021ರಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದರು. ಈ ಬಾರಿ ಕುಮಾರ್ ಬಂಗಾರಪ್ಪ ವಿರುದ್ಧ ಗೆದ್ದು ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಡಾ. ಎಂಸಿ ಸುಧಾಕರ್:ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಎಂ.ಸಿ.ಸುಧಾಕರ್ ಪ್ರವೃತ್ತಿಯಲ್ಲಿ ರಾಜಕಾರಣಿ. ಚಿಕ್ಕಬಳ್ಳಾಪುರ ಪ್ರಭಾವಿ ರಾಜಕಾರಣಿ, ಮೂರು ಬಾರಿ ಶಾಸಕ, ಎರಡು ಬಾರಿ ಪರಿಷತ್ ಸದಸ್ಯರಾಗಿದ್ದ ಎಂ.ಸಿ.ಆಂಜನೇಯ ರೆಡ್ಡಿ ಅವರ ಮೊಮ್ಮಗ. ತಂದೆ ಎಂಸಿ ಚೌಡರೆಡ್ಡಿ ಸಹ ಐದು ಬಾರಿ ಶಾಸಕರಾಗಿದ್ದರು. 1999ರಲ್ಲಿ ಚಿಂತಾಮಣಿಯಲ್ಲಿ ಚೌಡರೆಡ್ಡಿ ಸೋತ ಬಳಿಕ ಸುಧಾಕರ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
2004- 2008ರಲ್ಲಿ ಚುನಾವಣೆಗೆ ಸ್ಪರ್ಧಿಸಿದ ಸುಧಾಕರ್ ಗೆಲುವು ಸಾಧಿಸಿದರು. 2013ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಇದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2016ರಲ್ಲಿ ಕಾಂಗ್ರೆಸ್‌ಗೆ ಮರಳಿದರು. ಆದರೆ, 2018ರಲ್ಲಿ ಮತ್ತೆ ಟಿಕೆಟ್ ಸಿಗದ ಕಾರಣ ಪಕ್ಷ ತೊರೆದು, ಭಾರತೀಯ ಪ್ರಜಾ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಸೋತಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಗೆದ್ದು ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಬಿ ನಾಗೇಂದ್ರ:ಬಳ್ಳಾರಿಯಲ್ಲಿಪ್ರಭಾವಿ ಶ್ರೀರಾಮಲು ಅವರನ್ನು ಸೋಲಿಸಿರುವ ಬಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಒಲಿದಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯಿಂದ 2008ರಲ್ಲಿ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ, ಈ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆಗೆ ಬಯಸಿದ್ದರು. ಇದರಿಂದ ಕೂಡ್ಲಿಗಿಯಲ್ಲಿ ನಾಗೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧೆ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಶ್ರೀರಾಮುಲು ಅವರ ಸಹೋದರ ಸಣ್ಣ ಪಕ್ಕೀರಪ್ಪ ಅವರನ್ನು ಸೋಲುಸಿ ಮೂರನೇ ಆಯ್ಕೆಯಾದರು. ಈ ಬಾರಿ ಚುನಾವಣೆಯಲ್ಲಿ ಶ್ರೀರಾಮುಲು ವಿರುದ್ಧವೇ ಗೆದ್ದು ನಾಗೇಂದ್ರ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರ ಫಲ ಎಂಬಂತೆ ಸಚಿವ ಸ್ಥಾನದ ಭಾಗ್ಯ ಸಿಕ್ಕಿದೆ.
ಬೈರತಿ ಸುರೇಶ್:ಸಿದ್ದರಾಮಯ್ಯನವರಆಪ್ತ,ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಮೊದಲ ಬಾರಿ ಸಚಿವರಾಗಿದ್ದಾರೆ. 2012ರಲ್ಲಿ ಎಂಎಲ್‌ಸಿ ಆಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. 2018ರ ಮತ್ತು 2023ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಗೆದ್ದಿರುವ ಇವರು, ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಮಾಜಿ ಶಾಸಕ ಬೋಸರಾಜುಗೆ ಒಲಿದ ಸಚಿವ ಸ್ಥಾನ