ಕರ್ನಾಟಕ

karnataka

ETV Bharat / state

ಶಾಲಾ ಶಿಕ್ಷಕರ ನೇಮಕಾತಿ: ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ

2022-27ಕ್ಕೆ ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ ಹಾಗೂ ಶ್ರೀಶೈಲದಲ್ಲಿ ಯಾತ್ರಿ ನಿವಾಸ ಸಂಕೀರ್ಣ ಕಟ್ಟಡ ನಿರ್ಮಾಣ ಸೇರಿ ವಿವಿಧ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

karnataka-cabinet-agree-to-the-amendment-of-school-teachers-recruitment-age-limit
ಶಾಲಾ ಶಿಕ್ಷಕರ ನೇಮಕಾತಿ: ವಯೋಮಿತಿ ತಿದ್ದುಪಡಿಗೆ ಸಚಿವ ಸಂಪುಟ ಅಸ್ತು

By

Published : Aug 12, 2022, 5:29 PM IST

ಬೆಂಗಳೂರು:ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ನಿಗದಿಯಾಗಿದ್ದ ವಯೋಮಿತಿಯನ್ನು ತಿದ್ದುಪಡಿ ಮಾಡುವ ಬಗ್ಗೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಶಾಲಾ ಶಿಕ್ಷಕರ ನೇಮಕಾತಿ: ವಯೋಮಿತಿ ತಿದ್ದುಪಡಿಗೆ ಸಚಿವ ಸಂಪುಟ ಅಸ್ತು

ರಾಜ್ಯದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಸರ್ಕಾರದ ಶಿಕ್ಷಕರ ನೇಮಕಾತಿಗೆ ವಯೋಮಿತಿಯನ್ನು ಸಡಿಲಿಕೆ ಮಾಡಿದೆ. ಪರಿಶಿಷ್ಟ ಜಾತಿ, ವರ್ಗಕ್ಕೆ 47 ವರ್ಷ, ಹಿಂದುಳಿದ ವರ್ಗಕ್ಕೆ 45 ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 42 ವರ್ಷದವರೆಗೆ ಶಿಕ್ಷಕರ ನೇಮಕ ಪರೀಕ್ಷೆ ಬರೆಯುವುದಕ್ಕೆ ಇನ್ಮುಂದೆ ಅವಕಾಶ ಲಭ್ಯವಾಗಲಿದೆ.

ಸುಮಾರು 15 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರ ಮತ್ತೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ನಿಗದಿತ ಅಂಕ ಪಡೆಯದ ಕಾರಣಕ್ಕೆ ನೇಮಕ ಪೂರ್ತಿಯಾಗಿಲ್ಲ. ಒಂದೆಡೆ ಹುದ್ದೆ ಖಾಲಿ ಇದ್ದರೆ, ಇನ್ನೊಂದೆಡೆ ಅಭ್ಯರ್ಥಿಗಳ ವಯೋಮಿತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಜೊತೆಗೆ ಕಟ್ ಆಫ್ ಮಾರ್ಕ್ಸ್ ಪ್ರಮಾಣವನ್ನು ಶೇ.60ರಿಂದ ಶೇ.50ಕ್ಕೆ ಇಳಿಕೆ ಮಾಡಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ನೇಮಕ ಎರಡಕ್ಕೂ ಈ ನಿಯಮ ಅನ್ವಯವಾಗಲಿದೆ ಎಂದರು.

ಬೆಂಗಳೂರು ದಕ್ಷಿಣ ತಾಲೂಕಿನ ಕುರುಬರಹಳ್ಳಿ ಗ್ರಾಮದ ಸರ್ವೆ ನಂ, 89ರ 25-35 ಎಕರೆ /ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಜನಸೇವಾ ಟ್ರಸ್ಟ್​ಗೆ ಮಂಜೂರು ಮಾಡಲಾಗಿದೆ. ಅಲ್ಲದೇ, ದಾಸನಪುರ ಹೋಬಳಿ ಕಮ್ಮಸಂದ್ರ ಗ್ರಾಮದ ಸರ್ವೆ ನಂ. 65ರಲ್ಲಿ3-24 ಎಕರೆ/ಗುಂಟೆ ಜಮೀನನ್ನು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಗೆ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ವಿಷಯಗಳು:

  • ರಾಜ್ಯದಲ್ಲಿ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು 22.40 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
  • ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಕಾಟ್ರಳ್ಳಿ ಮತ್ತು ಗುನ್ನಹಳ್ಳಿ ಗ್ರಾಮದ ನಡುವೆ ಹರಿಯುವ ಹಿರೇಹಳ್ಳಕ್ಕೆ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ 12.35 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.‌
  • ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸುಮಾರು 100 ಕೋಟಿ ರೂ. ಯೋಜನೆಗೆ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗರ ಸಣ ನೀರಾವರಿ ಕರೆಯಿಂದ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 16 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ಯೋಜನೆಯನ್ನು ಒಟ್ಟು 18 ಕೋಟಿ ರೂ.ಗಳ ಅಂದಾಜು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಹೊಸ ಬಸ್ ಖರೀದಿಗೆ ಅಸ್ತು :2022-23ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಅವಶ್ಯವಿರುವ ವಿವಿಧ ಮಾದರಿಯ 650 ಹೊಸ ಬಸ್​ಗಳನ್ನು 199.40 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 840 ಬಿಎಸ್-5 ಡೀಸೆಲ್ ಬಸ್​ಗಳನ್ನು ಒಟ್ಟಾರೆ 336 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
  • ನರಗುಂದ ವಿಧಾನಸಭಾ ಕ್ಷೇತ್ರದ ಬನಹಟ್ಟಿ, ಕುಲಗೇರಿ, ಸುರಕೋಡ, ಖಾನಾಪುರ, ರಢೀರನಾಗನೂರು, ಕೊಳಚಿ ಹಾಗೂ ಕೊಣ್ಣೂರು ಏತ ನೀರಾವರಿ ಯೋಜನೆಗಳ ಪಿಎಸ್​ಸಿ. ಪೈಪ್​ಗಳನ್ನು ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ ಕಾಮಗಾರಿಗಳನ್ನು 80 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ.
  • ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ, 2022-27ಕ್ಕೆ ಅನುಮೋದನೆ.
  • ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಬೆಂಗಳೂರಿನ ಮುಖ್ಯ ಕಚೇರಿಯ ಆವರಣದಲ್ಲಿ 90.00 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನೂತನ 'ಅಭಿವೃದ್ಧಿ ಭವನ' ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  • ತುಮಕೂರು ಜಿಲ್ಲೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ಹರಿದೇವನಹಳ್ಳಿ ಅಣೆಕಟ್ಟಿನ ಎಡದಂಡೆ ಕಾಲುವೆ ಹಾಗೂ ಬಲದಂಡೆ ಕಾಲುವೆಗಳಿಗೆ ಆರ್​​ಸಿಸಿ (ಬಾಕ್ಸ್ ಮಾದರಿಯಲ್ಲಿ) ನಿರ್ಮಿಸಿ ಆಧುನೀಕರಣಗೊಳಿಸುವ ಕಾಮಗಾರಿಯ ಪರಿಷ್ಕೃತ ಅಂದಾಜು 12.22 ಅನುಮೋದನೆ ನೀಡಲಾಗಿದೆ.
  • ಹಾಸನ ನಗರದಲ್ಲಿ ಸರ್ಕಾರಿ ಕಛೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣದ 2ನೇ ಹಂತದ ಕಾಮಗಾರಿಯ (ಹಾಸನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ) 20.00 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.‌
  • ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಕ್ಷೇತ್ರ ಶ್ರೀಶೈಲದಲ್ಲಿ ಯಾತ್ರಿ ನಿವಾಸ ಸಂಕೀರ್ಣ ಕಟ್ಟಡವನ್ನು 85.00 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  • ಕನಕಗಿರಿ ವಿಧಾನಸಭಾ ಕ್ಷೇತ್ರದ ರಾರಾವಿ-ಬೇಲೂರು ರಸ್ತೆ (ರಾಜ್ಯ ಹೆದ್ದಾರಿ-63) ಕಿ.ಮೀ. 68.00ರಿಂದ 90.46 ರವರೆಗೆ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು 30,00 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್‌ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಲಭಾವಿ ಮತ್ತು ಇತರ 03 ಗ್ರಾಮಗಳಿಗೆ (08 ಜನವಸತಿಗಳು) ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ಯೋಜನೆಯನ್ನು DBOT ಅಧಾರದ ಮೇಲೆ ಒಟ್ಟು 30.00 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

ಇದನ್ನೂ ಓದಿ:ಎಸಿಬಿ ರದ್ಧತಿ ಬಗ್ಗೆ ಅಧ್ಯಯನ ವರದಿ ನೀಡಲು ಕಾನೂನು ಇಲಾಖೆಗೆ ಸೂಚನೆ: ಸಿಎಂ

ABOUT THE AUTHOR

...view details