ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 3,27,747 ಕೋಟಿ ರೂ.ಗಾತ್ರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದಾರೆ. ಗ್ಯಾರಂಟಿಗಳಿಗೆ ಹಣ ಹೊಂದಿಸುವ ಗ್ಯಾರಂಟಿ ಬಜೆಟ್ ಇದಾಗಿದೆ. ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಹೆಚ್ಚು ಅನುದಾನ ನೀಡಿದ್ದು, ಇನ್ನು ಕೆಲ ಇಲಾಖೆಗಳಿಗೆ ಅನುದಾನ ಕಡಿತ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಗ್ಯಾರಂಟಿ ಸವಾಲಿನೊಂದಿಗೆ ಆದಾಯ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಪಂಚ ಗ್ಯಾರಂಟಿಗಳಿಗಾಗಿ ಕೆಲ ತೆರಿಗೆಗಳನ್ನು ಏರಿಸಿ, ಸಾಲದ ಮೊರೆ ಹೋಗಿ, ಆದಾಯ ಸಂಗ್ರಹದ ಗುರಿಯನ್ನು ಹೆಚ್ಚಿಸಿ ಹಣ ಹೊಂದಿಸುವ ಕಸರತ್ತು ಮಾಡಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಬೇಕಾಗಿರುವ ಅಂದಾಜು 34,410 ಕೋಟಿ ರೂ.ನ್ನು ಹೊಂದಿಸಿ ಬಜೆಟ್ ಮಂಡನೆ ಮಾಡಿದ್ದಾರೆ.
ಪಂಚ ಗ್ಯಾರಂಟಿಗಳ ವ್ಯಾಪ್ತಿ ಇಲಾಖೆಗಳಿಗೆ ಹೆಚ್ಚಿನ ಅನುದಾನ: ಸಿಎಂ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿಗಳಾದ ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ವ್ಯಾಪ್ತಿಗೊಳಪಡುವ ಪಂಚ ಇಲಾಖೆಗಳ ಅನುದಾನವನ್ನು ಗಣನೀಯವಾಗಿ ಏರಿಕೆ ಮಾಡಿದ್ದಾರೆ. ಆ ಮೂಲಕ ಪಂಚ ಗ್ಯಾರಂಟಿ ಯೋಜನೆಗಳಿಗೆ ಇಲಾಖಾವಾರು ಹಣ ನೀಡಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯಾಪ್ತಿಗೆ ಬರುವ ಅನ್ನಭಾಗ್ಯ ಯೋಜನೆಗೆ ಉಳಿದಿರುವ ಆರ್ಥಿಕ ವರ್ಷದಲ್ಲಿ ಅಂದಾಜು 10,275 ಕೋಟಿ ರೂ. ವೆಚ್ಚ ಆಗಲಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ಒಟ್ಟು 10,460 ಕೋಟಿ ರೂ. ಅನುದಾನ ನೀಡಿದ್ದಾರೆ. ಇದೇ ಫೆಬ್ರವರಿಯಲ್ಲಿ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ನಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ 4,600 ಕೋಟಿ ರೂ. ಅನುದಾನ ನೀಡಲಾಗಿತ್ತು.
ಇನ್ನು ಗೃಹ ಲಕ್ಷ್ಮಿ ಯೋಜನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಉಳಿದ ಅವಧಿಗೆ ಗೃಹ ಲಕ್ಷ್ಮಿ ಯೋಜನೆಗೆ ಅಂದಾಜು 17,500 ಕೋಟಿ ರೂ. ಆಗಲಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 24,166 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಇದೇ ಫೆಬ್ರವರಿಯಲ್ಲಿ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ನಲ್ಲಿ ಇಲಾಖೆಗೆ 5,676 ಕೋಟಿ ರೂ. ಅನುದಾನ ನೀಡಿದ್ದರು.
ಇಂಧನ ಇಲಾಖೆ ವ್ಯಾಪ್ತಿಗೆ ಬರುವ ಗೃಹ ಜ್ಯೋತಿ ಯೋಜನೆಗಾಗಿ ಈ ವರ್ಷದ ಉಳಿದ ಅವಧಿಗೆ ಅಂದಾಜು 9,000 ಕೋಟಿ ವೆಚ್ಚ ಆಗಲಿದೆ. ಇದಕ್ಕಾಗಿ ಇಂಧನ ಇಲಾಖೆಗೆ ಒಟ್ಟು 22,773 ಕೋಟಿ ರೂ. ಮೀಸಲಿರಿಸಿದ್ದಾರೆ. ಬೊಮ್ಮಾಯಿ ತಮ್ಮ ಬಜೆಟ್ ನಲ್ಲಿ ಇಂಧನ ಇಲಾಖೆಗೆ 13,803 ಕೋಟಿ ರೂ. ಮೀಸಲಿರಿಸಿದ್ದರು.
ಶಕ್ತಿ ಯೋಜನೆ ಸಾರಿಗೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಶಕ್ತಿ ಯೋಜನೆಗೆ ಜೂನ್ ರಿಂದ ಮಾರ್ಚ್ ವರೆಗೆ 2,800 ಕೋಟಿ ರೂ. ಹಂಚಿಕೆ ಮಾಡಿದ್ದಾರೆ.