ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ದಯನೀಯ ಸೋಲಿನ ಕುರಿತು ರಾಷ್ಟ್ರೀಯ ನಾಯಕರು ವರದಿ ಕೇಳಿದ್ದರು. ಈಗ ಇರುವ ಮಾಹಿತಿಯನ್ನು ಕಳುಹಿಸಿ ಕೊಡಲಾಗಿದೆ. ಸದ್ಯದಲ್ಲೇ ಸೋಲಿನ ಕುರಿತು ಆತ್ಮಾವಲೋಕನ ಸಭೆ ನಡೆಸಿ ತಪ್ಪು ತಿದ್ದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸೋಲು, ಗೆಲುವಿನ ಬಗ್ಗೆ ಪರಾಮರ್ಶೆ ಸಭೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದ ಕುರಿತು ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿ ಚರ್ಚಿಸಲಾಯಿತು. 66 ಸ್ಥಾನ ಮಾತ್ರ ಬಿಜೆಪಿ ಗೆದ್ದಿದ್ದು, ಇಡೀ ರಾಜಕೀಯ ಬೆಳವಣಿಗೆ ಬಗ್ಗೆ ಆತ್ಮಾವಲೋಕನ ಮಾಡುವ ಕುರಿತು ಸಮಾಲೋಚನೆ ನಡೆದಿದೆ.
ಸಭೆಯಲ್ಲಿ ಮಾಜಿ ಸಚಿವರಾದ ಅಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್. ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ ರಾಮಮೂರ್ತಿ ಸಭೆಯಲ್ಲಿ ಭಾಗಿಯಾಗಿದ್ದು ಚರ್ಚೆಯಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಂತಿಮವಾಗಿ ವಿಧಾನಸಭಾ ಚುನಾವಣಾ ಸೋಲು ಹಿನ್ನೆಲೆ ಸೋಲಿನ ಒಟ್ಟಾರೆ ಅವಲೋಕನ ಮಾಡಬೇಕು ಮತ್ತು ಕ್ಷೇತ್ರವಾರು ಸೋಲಿನ ವಿಮರ್ಶೆ ಮಾಡಲು ತೀರ್ಮಾನಿಸಲಾಗಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರಮುಖರು ಸೇರಿದ್ದೆವು. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಚರ್ಚೆ ಮಾಡಿದ್ದೇವೆ. ರಿಸಲ್ಟ್ ಬಗ್ಗೆ, ಬೇರೆ ಬೇರೆ ಕಡೆಯಿಂದ ಮಾಹಿತಿ ಕಲೆ ಹಾಕಿದ್ದೇವೆ. ಇಂದಿನ ಸಭೆಯಲ್ಲಿ ಎರಡು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ಕಡ್ಡಾಯವಾಗಿ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ. ಕ್ಷೇತ್ರವಾರು ನಮ್ಮ ಮತಗಳಿಕೆ ಪ್ರಮಾಣ ಹಿಂದಿನ ರೀತಿಯೇ ಇದ್ದರೂ ನಮಗೆ ಸ್ಥಾನಗಳು ಕಡಿಮೆ ಬಂದಿವೆ. ಈ ಬಗ್ಗೆ ಅವಲೋಕನ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಗಿದೆ. ಎರಡನೆಯದಾಗಿ ಅಧ್ಯಕ್ಷರು ಮೂರ್ನಾಲ್ಕು ದಿನದಲ್ಲಿ ಸಭೆ ಕರೆಯಬೇಕು ಅಲ್ಲಿ ಎಲ್ಲಾ ಚರ್ಚೆ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದರು.