ಬೆಂಗಳೂರು:ವಿಧಾನಸಭೆ ಚುನಾವಣೆ ಅಖಾಡ ರಂಗೇರುತ್ತಿದೆ. ಸೋಮವಾರ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ರಣಕಣದಲ್ಲಿನ ಸಮರಕ್ಕೆ ಮುನ್ನಡಿ ಬರೆದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಏ.20 ಕೊನೆಯ ದಿನವಾಗಿದೆ. ಸೋಮವಾರ ಶುಭದಿನವಾದ ಕಾರಣ ಜಾತ್ರೋಪಾದಿಯಲ್ಲಿ ಅಭ್ಯರ್ಥಿಗಳು ರಾಜ್ಯಾದ್ಯಂತ ನಾಮಪತ್ರ ಸಲ್ಲಿಕೆ ಮಾಡಿದರು.
1,263 ನಾಮಪತ್ರ ಸಲ್ಲಿಕೆ: ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿ, ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಅಶ್ವತ್ಥ ನಾರಾಯಣ, ಜೆ.ಸಿ.ಮಾಧುಸ್ವಾಮಿ, ಡಾ.ಕೆ ಸುಧಾಕರ್ ಸೇರಿ ಅನೇಕರು ಸೋಮವಾರ ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿ ಸೋಮವಾರ 842 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ ಒಟ್ಟು 1,263 ನಾಮಪತ್ರಗಳು ಸಲ್ಲಿಕೆಯಾಗಿವೆ.
ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವರುಣ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಜೆ.ಸಿ.ಮಧುಸ್ವಾಮಿ, ಔರಾದ್ ಕ್ಷೇತ್ರದಿಂದ ಪ್ರಭು ಚವ್ಹಾಣ್, ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ, ಸೊರಬ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಕನಕಪುರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್, ಗದಗ ಕ್ಷೇತ್ರದಿಂದ ಹೆಚ್.ಕೆ.ಪಾಟೀಲ್, ಹಳಿಯಾಳ ಕ್ಷೇತ್ರದಿಂದ ಆರ್.ವಿ.ದೇಶಪಾಂಡೆ, ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಸೇರಿದಂತೆ ಇತರೆ ಪ್ರಮುಖರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಇನ್ನುಳಿದಂತೆ ಸಚಿವರಾದ ಎಸ್.ಟಿ ಸೋಮಶೇಖರ್, ಎಂ.ಟಿ.ಬಿ ನಾಗರಾಜ್, ಡಾ.ಕೆ.ಸುಧಾಕರ್, ಕೆ.ಸಿ ನಾರಾಯಣ ಗೌಡ, ಶಂಕರ ಪಾಟೀಲ್ ಮುನೇನಕೊಪ್ಪ, ಕೈ ನಾಯಕರಾದ ಈಶ್ವರಖಂಡ್ರೆ, ರಾಜಶೇಖರ್ ಪಾಟೀಲ್, ಶಾಮನೂರು ಶಿವಶಂಕರಪ್ಪ, ಶರತ್ ಬಚ್ಚೇಗೌಡ, ಎಸ್.ಎಸ್.ಮಲ್ಲಿಕಾರ್ಜುನ, ಹೆಚ್.ಆಂಜನೇಯ, ಚಲುವರಾಯಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದರು. ಜೆಡಿಎಸ್ನ ಹೆಚ್.ಡಿ. ರೇವಣ್ಣ, ಬಿಜೆಪಿಯ ಪ್ರೀತಂ ಗೌಡ, ಸಂತೋಷ ಲಾಡ್, ವಿಜಯ ಕುಲಕರ್ಣಿ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಪ್ರಸಾದ್ ಅಬ್ಬಯ್ಯ, ಪರಣ್ಣ ಮುನವಳ್ಳಿ, ಅರುಣ್ ಕುಮಾರ್ ಪೂಜಾರ, ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಆರ್.ಪ್ರಕಾಶ್, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ರಾಜುಗೌಡ, ಹರೀಶ್ ಪೂಂಜಾ, ರಾಜಾವೆಂಕಟ್ಟಪ್ಪ ನಾಯಕ ಸೇರಿದಂತೆ ಇತರರು ನಾಮಪತ್ರ ಸಲ್ಲಿಸಿದರು. ಇತ್ತ ಕಾಂಗ್ರೆಸ್ ನಾಯಕ ಬಾಬುರಾವ್ ಚಿಂಚನಸೂರು ಗಾಯಗೊಂಡಿರುವ ಹಿನ್ನೆಲೆ ಅವರ ಪತ್ನಿ ಅಮರೇಶ್ವರಿ ಸೂಚಕರಾಗಿ ನಾಮಪತ್ರ ಸಲ್ಲಿಸಿದರು.