ನವದೆಹಲಿ:ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವು 'ಐದು ಬಿ' ಗಳ (Five Bs) ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ. ಬಾಗಲಕೋಟೆ, ಬೆಳಗಾವಿ, ಬಳ್ಳಾರಿ ಮತ್ತು ಬೀದರ್ ಜಿಲ್ಲೆಗಳು ಮತ್ತು ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆ ಇವೇ ಆ ಐದು ಬಿ ಗಳಾಗಿವೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಈ ಜಿಲ್ಲೆಗಳಲ್ಲಿ ಬಿಜೆಪಿಯ ಸಾಧನೆ ಅಷ್ಟೊಂದು ಉತ್ತಮವಾಗಿರಲಿಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಪ್ರಚಾರಕ್ಕಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೂಲಗಳ ಪ್ರಕಾರ, ನವದೆಹಲಿಯಲ್ಲಿನ ಪಕ್ಷದ ವರಿಷ್ಠರು ಕರ್ನಾಟಕದಾದ್ಯಂತ ಹರಡಿರುವ ಈ ಆರು ಜಿಲ್ಲೆಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ಇದರ ಮೂಲಕವೇ ಮತ್ತೆ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ ಎನ್ನಲಾಗಿದೆ.
ಆರು ಜಿಲ್ಲೆಗಳ ಪೈಕಿ ಬಾಗಲಕೋಟೆ ಮತ್ತು ಬೆಳಗಾವಿ ಹೊರತುಪಡಿಸಿದರೆ ಇತರ ಜಿಲ್ಲೆಗಳಲ್ಲಿ ಬಿಜೆಪಿಯ ಸಾಧನೆ ಕಳಪೆಯಾಗಿತ್ತು. 2018 ರಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶಗಳೆರಡರಲ್ಲೂ ಪಕ್ಷವು 32 ರಲ್ಲಿ ಕೇವಲ 11 ಸ್ಥಾನಗಳನ್ನು ಗೆದ್ದಿದೆ. ನಾಲ್ಕು ಸ್ಥಾನಗಳನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರದಲ್ಲಿ ತನ್ನ ಖಾತೆ ತೆರೆಯಲು ವಿಫಲವಾಗಿದೆ.
ಬಳ್ಳಾರಿ ಜಿಲ್ಲೆಯ ಒಂಬತ್ತು ಸ್ಥಾನಗಳ ಪೈಕಿ ಕೇವಲ ಮೂರು ಮತ್ತು ಬೀದರ್‌ನ ಆರರಲ್ಲಿ ಒಂದನ್ನು ಮಾತ್ರ ಭಾರತೀಯ ಜನತಾ ಪಕ್ಷ ಗೆದ್ದಿದೆ. ಬಾಗಲಕೋಟೆಯಲ್ಲಿ ಏಳರಲ್ಲಿ ಐದು ಸ್ಥಾನಗಳನ್ನು ಆಗ ಬಿಜೆಪಿ ಗಳಿಸಿತ್ತು. ಬೆಳಗಾವಿಯಲ್ಲಿ 18 ರಲ್ಲಿ 13 ಸ್ಥಾನಗಳನ್ನು ಜಯಿಸಿತ್ತು. ಈ ಆರು ಜಿಲ್ಲೆಗಳಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಲು ಬಿಜೆಪಿಯ ವರಿಷ್ಠರು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಅಂತಿಮವಾಗಿ ಪಕ್ಷವು ಅಧಿಕಾರದಲ್ಲಿ ಉಳಿಯಲು ಸಹಾಯ ಮಾಡುತ್ತದೆ ಎನ್ನಲಾಗಿದೆ.