ಬೆಂಗಳೂರು: ಮೇ ಮತ್ತು ಜೂನ್ ತಿಂಗಳಿನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಪೂರಕ ಪರೀಕ್ಷೆಯಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಶೇ.32 ರಷ್ಟು ಫಲಿತಾಂಶ ಬಂದಿದೆ.
ಒಟ್ಟು 1,58,881 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 1,57,756 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 50,478 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.32 ರಷ್ಟು ಫಲಿತಾಂಶ ಬಂದಿದೆ. ಸದ್ಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಕಾಲೇಜುಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಫಲಿತಾಂಶ ಪರಿಶೀಲಿಸುವುದು ಹೇಗೆ?:
- ಹಂತ 1: karresults.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
- ಹಂತ 2: ಮುಖಪುಟದಲ್ಲಿ ಕರ್ನಾಟಕ ಪಿಯುಸಿ ಪೂರಕ ಫಲಿತಾಂಶ 2023 ಗಾಗಿ ಲಭ್ಯವಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ
- ಹಂತ 3: ಹೊಸ ವಿಂಡೋ ಕಾಣಿಸಿಕೊಳ್ಳುತ್ತದೆ. ನಿಮ್ಮ ನೋಂದಣಿ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ
- ಹಂತ 4: ನಿಮ್ಮ ಕರ್ನಾಟಕ ಪಿಯುಸಿ ಪೂರಕ ಫಲಿತಾಂಶ 2023 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
- ಹಂತ 5: ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶದ ಪ್ರಿಂಟ್‌ಔಟ್ ಅನ್ನು ಡೌನ್‌ಲೋಡ್ ಮಾಡಿ.
ಪರೀಕ್ಷೆಗೆ ಹಾಜರಾದ 95,645 ಬಾಕಲಕರಲ್ಲಿ 28,901 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.30.22ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 62,111 ಬಾಲಕಿಯರಲ್ಲಿ 21,577 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ.34.74ರಷ್ಟು ಫಲಿತಾಂಶ ಪಡೆದಿದ್ದಾರೆ. ನಗರದ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 1,24,660 ವಿದ್ಯಾರ್ಥಿಗಳಲ್ಲಿ 40,757 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.32.69ರಷ್ಟು ಫಲಿತಾಂಶ ಬಂದಿದೆ. ಗ್ರಾಮಾಂತರ ಭಾಗಗದಲ್ಲಿ ಪರೀಕ್ಷೆಗೆ ಹಾಜರಾದ 33,096 ವಿದ್ಯಾರ್ಥಿಗಳಲ್ಲಿ 9,721 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.29.37 ರಷ್ಟು ಫಲಿತಾಂಶ ಬಂದಿದೆ.