ಬೆಂಗಳೂರು:ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮತ್ತೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ನಾರಾಯಣ ಗೌಡ ಜಾಮೀನಿನ ಮೇಲೆ ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದರು. ಆದರೆ, ಸಾರ್ವಜನಿಕ ಆಸ್ತಿ ಹಾನಿ ಆರೋಪದ ಮೇಲೆ 2017ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ ಕಾರಣಕ್ಕೆ ಅವರ ವಿರುದ್ಧ ವಾರಂಟ್ ಜಾರಿಯಾಗಿತ್ತು. ಇದರಿಂದ ಜೈಲಿನಿಂದ ಬಿಡುಗಡೆಯಾಗುತ್ತಿದಂತೆಯೇ ನಾರಾಯಣ ಗೌಡ ಅವರನ್ನು ನಗರದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದರು. ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಗರದ 30ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದರು. ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಇದರಿಂದ ನಾರಾಯಣ ಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಇದಕ್ಕೂ ಮುನ್ನ ವಿಚಾರಣೆ ವೇಳೆ ನಾರಾಯಣ ಗೌಡ ಪರ ವಕೀಲರು, ಪೊಲೀಸರ ನಿರ್ಲಕ್ಷ್ಯದಿಂದ ವಾರಂಟ್ ಜಾರಿಯಾಗಿದೆ. ಅರ್ಜಿದಾರರು ಪ್ರತಿ ದಿನ ಎಲ್ಲರಿಗೂ ಸಿಗುವಂತಹ ವ್ಯಕ್ತಿ. ಅವರು ತಲೆಮರೆಸಿಕೊಂಡು ಹೋಗುವವರಲ್ಲ. ವಾರಂಟ್ ಜಾರಿಯಾದ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದಿದ್ದರೆ ಸ್ವತಃ ಅವರೇ ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.