ಕರ್ನಾಟಕ

karnataka

ETV Bharat / state

ಸರ್ಕಾರ ತಪ್ಪು ಮಾಡಿದರೆ ಅದನ್ನು ಹೇಳುವ ಧೈರ್ಯ ಪತ್ರಕರ್ತರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ

ಪ್ರೆಸ್​ ಕ್ಲಬ್​ ಆಫ್​ ಬೆಂಗಳೂರು ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್​ ಭಾಗಿಯಾದರು.

journalists-should-have-the-courage-to-say-if-government-is-wrong-cm-siddaramaiah
ಯಾವುದೇ ಸರ್ಕಾರ ತಪ್ಪು ಮಾಡಿದರೂ ಅದನ್ನು ಹೇಳುವ ಧೈರ್ಯ ಪತ್ರಕರ್ತರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Dec 31, 2023, 7:27 PM IST

ಬೆಂಗಳೂರು :ಸಂವಿಧಾನವೇ ನಮ್ಮ ಧರ್ಮ. ರಾಜಕೀಯ ಧರ್ಮ ಅನುಸರಿಸುವುದೇ ಸಂವಿಧಾನಕ್ಕೆ ಕೊಡುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ "ವರ್ಷದ ವ್ಯಕ್ತಿ-ವಿಶೇಷ ವ್ಯಕ್ತಿ" ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, 2024ರ ಪ್ರೆಸ್ ಕ್ಲಬ್ ಡೈರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುದೀರ್ಘ ಮತ್ತು ಅರ್ಥಪೂರ್ಣ ಚರ್ಚೆಯ ಬಳಿಕ ನಮ್ಮ ಈ ಸಂವಿಧಾನ ಜಾರಿಯಾಗಿದೆ. ಆದ್ದರಿಂದ ಈ ಸಂವಿಧಾನವನ್ನು ಗೌರವಿಸುವುದು, ಪಾಲಿಸುವುದು ಎಲ್ಲಾ ರಾಜಕೀಯ ಪಕ್ಷಗಳ, ವ್ಯಕ್ತಿಗಳ ಕರ್ತವ್ಯ ಎಂದು ಹೇಳಿದರು.

ಅವಕಾಶ ವಂಚಿತರ ಪರವಾಗಿ, ಧ್ವನಿ ಇಲ್ಲದವರ ಪರವಾಗಿ ದ್ವನಿ ಎತ್ತಿ ಬೆಂಬಲಿಸುವುದು. ವಸ್ತುನಿಷ್ಠವಾಗಿ ಸುದ್ದಿಗಳನ್ನು ವರದಿ ಮಾಡುವುದು ಪತ್ರಿಕಾ ವೃತ್ತಿಯ ಮೂಲಭೂತ ಮೌಲ್ಯ. ಈ ಮೌಲ್ಯಗಳನ್ನು ಪಾಲಿಸುವುದೇ ಸಂವಿಧಾನಕ್ಕೆ ಕೊಡುವ ಗೌರವ. ಇದನ್ನು ಬಿಟ್ಟು ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನು ದೊಡ್ಡ ಚರ್ಚೆ ಮಾಡಿ ಮೌಢ್ಯ ಬೆಳೆಸಿದಂತಹ ರೀತಿಯಲ್ಲಿ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಯಾವುದೇ ಸರ್ಕಾರ ತಪ್ಪು ಮಾಡಿದರೂ ಅದನ್ನು ಹೇಳುವ ಧೈರ್ಯ ಪತ್ರಕರ್ತರಿಗೆ ಇರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಅಭಿವೃದ್ಧಿಯ ಚರ್ಚೆ ಮತ್ತು ಕನಸು ಇತ್ತು. ಈ ಬಗ್ಗೆ ಪತ್ರಕರ್ತ ಸಮೂಹ ಎಚ್ಚರ ವಹಿಸಬೇಕು ಎಂದರು.

ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಚತುರ ಸಂಘಟಕರು ಮತ್ತು ಕ್ರಿಯಾಶೀಲ ವ್ಯಕ್ತಿ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ಸೂಚಿಸಿದರು. ನನ್ನನ್ನು ಜೆಡಿಎಸ್​ನಿಂದ ಉಚ್ಛಾಟಣೆ ಮಾಡಿದರೇ ಹೊರತು ನಾನು ಜೆಡಿಎಸ್ ಬಿಡಲಿಲ್ಲ. ಹೀಗಾಗಿ ವರದಿ, ವಿಶ್ಲೇಷಣೆ ಮಾಡುವಾಗ ನಾನು ಜೆಡಿಎಸ್ ಪಕ್ಷ ತೊರೆದೆ ಎಂದು ಬರೆಯುವುದು ಸರಿಯಲ್ಲ ಎಂದರು.

ಡಿಸಿಎಂ ಡಿ ಕೆ ಶಿವಕುಮಾರ್​ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು.

ಡಿಸಿಎಂ ಡಿಕೆಶಿಗೆ ವರ್ಷದ ವ್ಯಕ್ತಿ ಪ್ರಶಸ್ತಿ :ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ವಿಶೇಷ ಪ್ರಶಸ್ತಿ ಪುರಸ್ಕೃತರಾದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದರಾಜು ಅವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು.

ಇದನ್ನೂ ಓದಿ :ನಿಗಮ ಮಂಡಳಿಗೆ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details